ಮೂಡಿಗೆರೆಯಲ್ಲಿ ಬಿಜೆಪಿ ಆಯೋಜಿಸಿದ್ದ ಎಸ್‌ಐಆರ್ ಪರಿಷ್ಕರಣಾ ಕಾರ್ಯಗಾರದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿದರು.  
ಚಿಕ್ಕಮಗಳೂರು

ರಾಜ್ಯ ಸರ್ಕಾರದಿಂದ ಕೇಂದ್ರದ ಯೋಜನೆಗಳ ಹೈಜಾಕ್

ಮೂಡಿಗೆರೆ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಮ್ಮದು ಎಂದು ಬಿಂಬಿಸಿಕೊಂಡು ಜನರ ಮುಂದೆ ನಗೆ ಪಾಟಲಿಗಿಡಾಗಿದೆ. ರಾಜ್ಯಸರ್ಕಾರ ಯಾವುದೇ ಅಭಿವೃದ್ಧಿ ಯೋಜನೆ ರೂಪಿಸಲಾಗದೆ ಖಜಾನೆ ಖಾಲಿ ಮಾಡಿಕೊಂಡು ಕಾಟಚಾರದ ಆಡಳಿತ ನಡೆಸುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮತ ಪರಿಷ್ಕರಣಾ ಕಾರ್ಯಗಾರದಲ್ಲಿ ಮತನಾಡಿ, ಸುಳ್ಳು ಪದವನ್ನು ರಾಜಕೀಯದಲ್ಲಿ ಹೆಚ್ಚು ಬಳಸಬಾರದು. ಆದರೆ ರಾಜ್ಯ ಸರ್ಕಾರ ಕಳೆದ 3 ವರ್ಷದಿಂದ ಸುಳ್ಳನ್ನೆ ಹೇಳಿ ರಾಜ್ಯದ ಜನರನ್ನು ನಂಬಿಸಿಕೊಂಡು ಮುಂದುವರಿದಿದೆ. ಕಾಂಗ್ರೆಸ್ ಸರ್ಕಾರ ತಮ್ಮ ಬೊಕ್ಕಸದಿಂದ ಪಡಿತರದಾರರಿಗೆ ಒಂದು ಕೆಜಿ ಅಕ್ಕಿಯನ್ನು ಇದುವರೆಗೂ ಕೊಟ್ಟಿಲ್ಲ. ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು, ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ಕೊಡಲಾಗುತ್ತಿದೆ ಎಂಬ ಸುಳ್ಳು ಕಾಂಗ್ರೆಸ್ ಸರ್ಕಾರದಿಂದ ಆಗಾಗ ಬರುತ್ತದೆ ಎಂದರು.
ಕೇಂದ್ರ ಸರ್ಕಾರದಿಂದ ಗರ್ಭಕಂಠ ಕಾಯಿಲೆಗೆ ಉಚಿತ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದೆ. 13 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಹೆಣ್ಣು ಮಕ್ಕಳಿಗೆ ವ್ಯಾಕ್ಸಿನ್ ಕಡ್ಡಾಯ ಮಾಡಲಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ತಮ್ಮದು ಎಂದು ಹೇಳಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಎಸ್‌ಐಅರ್ ಜಾರಿಗೊಳಿಸಿ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗುತ್ತದೆ ಎಂದು ಕಾಂಗ್ರೆಸ್ ಜನರಿಗೆ ಸುಳ್ಳು ಹೇಳುತ್ತಿದೆ. ಭಯೋತ್ಪಾದರು, ಅಕ್ರಮ ವಲಸಿಗರು, ವಿದೇಶಿಯರ ಅಕ್ರಮ ಮತಗಳನ್ನು ಪಟ್ಟಿಯಿಂದ ತೆಗೆದು ಹಾಕಲು ಕೇಂದ್ರ ಸರ್ಕಾರ ಎಸ್‌ಐಆರ್ ಜಾರಿಗೊಳಿಸಿದೆ. ಹೊರಗಿನವರ ಒಂದು ಮತ ಕೂಡ ಮತದಾರರ ಪಟ್ಟಿಯಲ್ಲಿ ಸೇರದಂತೆ ಬಿಜೆಪಿ ಕಾರ್ಯಕರ್ತರು ಗಮನ ಹರಿಸಬೇಕು. ಮತದಾರ ಪಟ್ಟಿಯಲ್ಲಿ ಕಾಂಗ್ರೆಸ್ ಸರ್ಕಾರ ಅಕ್ರಮ ನಡೆಸುವ ಸಾಧ್ಯತೆಯಿದೆ. ಇವುಗಳನ್ನು ಬಿಜೆಪಿ ಕಾರ್ಯಕರ್ತರು ಬೇಧಿಸಿ ತಮ್ಮ ವ್ಯಾಪ್ತಿಯ ಚುನಾವಣಾ ಬೂತ್‌ಗಳನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಜೆ.ಎಸ್.ರಘು, ದೀಪಕ್ ದೊಡ್ಡಯ್ಯ, ಹೆಚ್.ಬಿ.ಶಿವಣ್ಣ, ಬಿ.ಎನ್.ಜಯಂತ್, ಮನೋಜ್ ಹಳೆಕೋಟೆ, ಪ್ರಮೋದ್ ದುಂಡುಗ, ಪಂಚಾಕ್ಷರಿ, ಭರತ್, ದನಿಕ್ ಕೊಡದಿಣ್ಣೆ. ಪ್ರಶಾಂತ್, ಸುನಿಲ್ ಇತರರಿದ್ದರು.