ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಸೋಮವಾರ ಮಳೆ ಸುರಿದಾಗ ಕಂಡುಬಂದ ದೃಶ್ಯ.
ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನದ ನಂತರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಮಧ್ಯಾಹ್ನ 3.45ಕ್ಕೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಭಾನುವಾರವೂ ಸಹ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ಸಾಕಷ್ಟು ತಂಪು ನೀಡಿದೆ. ಮಾನ್ಸೂನ್ ಆರಂಭದ ನಿರೀಕ್ಷೆಯಲ್ಲಿದ್ದ ಜನರಿಗೆ ಚಂಡಮಾರುತ ಪ್ರಭಾವದ ಮಳೆ ಕೃಷಿ ಕೆಲಸಗಳಿಗೆ ಸಿದ್ಧತೆ ಮಾಡಿಕೊಳ್ಳಲು ಪೂರಕವಾಗಿದ್ದು, ಮುಂಗಾರಿನ ಕೆಲಸ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ.
ಬಾಳೆಹೊನ್ನೂರು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 1ರಿಂದ 2 ಇಂಚು ಮಳೆ ಸುರಿದಿದ್ದು, ಬಾಳೆಹೊನ್ನೂರು ಪಟ್ಟಣ ಸೇರಿದಂತೆ ರಂಭಾಪುರಿ ಪೀಠ, ಮಸೀದಿಕೆರೆ, ಮೆಣಸುಕೊಡಿಗೆ, ವಾಟುಕೊಡಿಗೆ, ಸೀಕೆ, ಮುದುಗುಣಿ, ಅರಳೀಕೊಪ್ಪ, ಬನ್ನೂರು, ಮಾಗುಂಡಿ, ಹೊಳೆಬಾಗಿಲು, ಸೀಗೋಡು, ಸಿಆರ್‌ಎಸ್, ಹೇರೂರು, ಹೂವಿನಹಕ್ಲು, ಮೇಲ್ಪಾಲ್, ಸಂಗಮೇಶ್ವರಪೇಟೆ, ಕಡಬಗೆರೆ, ಹಲಸೂರು, ಮಹಲ್ಗೋಡು ಮುಂತಾದ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ.