ಮೂಡಿಗೆರೆ ಪಟ್ಟಣ ಈದ್ಗಾ ಮೈದಾನದ ಕಾಂಪೌಂಡ್ ಬಳಿ ಇದ್ದ ಮರ ರಸ್ತೆಗೆ ಬಿದ್ದಿದ್ದು ವಿದ್ಯುತ್ ಕಂಬ ತುಂಡಾಗಿ ಧರೆಗುರುಳಿದೆ. 
ಚಿಕ್ಕಮಗಳೂರು

ಮಳೆಯ ಆರ್ಭಟಕ್ಕೆ ಅಪಾರ ಹಾನಿ

ಜಿ. ಗಜೇಂದ್ರ
ಮೂಡಿಗೆರೆ: ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು ಬಹಳಷ್ಟು ಹಾನಿಯಾಗಿದೆ. ತುಂತುರು ಮಳೆ ಭಾನುವಾರದವರೆಗೂ ಮುಂದುವರಿಯಿತು.
ಪಟ್ಟಣದಲ್ಲಿ ಗಾಳಿ, ಮಳೆಗೆ ವಿದ್ಯುತ್ ಕಡಿತಗೊಂಡು ರಾತ್ರಿ 8ಕ್ಕೆ ವಿದ್ಯುತ್ ಪೂರೈಕೆಯಾದರೂ ಆಗಾಗ ಸಂಪರ್ಕ ಕಡಿತಗೊಳ್ಳುತ್ತಿತ್ತು.  ಗ್ರಾಮೀಣ ಭಾಗದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು ಬಿರುಗಾಳಿ ಇರಲಿಲ್ಲ. ಗ್ರಾಮೀಣ ಭಾಗದಲ್ಲಿ ಶನಿವಾರದಿಂದ ವಿದ್ಯುತ್ ಕಡಿತಗೊಂಡಿದ್ದು ಕುಡಿಯುವ ನೀರಿಗೂ ತೊಂದರೆಯಾಗಿದೆ. ಪರೀಕ್ಷಾ ಸಮಯವಾಗಿದ್ದರಿಂದ ವಿದ್ಯಾರ್ಥಿಗಳು ಮೇಣದಬತ್ತಿ ಬೆಳಕಿನಲ್ಲಿ ಓದಿಕೊಳ್ಳಬೇಕಾಯಿತು. 
ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ ಬಿಳಗುಳ, ಕಡೆಮಾಡ್ಕಲ್, ಕುದ್ರೆಗುಂಡಿ, ಹ್ಯಾಂಡ್‌ಪೋಸ್ಟ್, ಕೃಷ್ಣಾಪುರ, ಬಿದರಹಳ್ಳಿ, ಲೋಕವಳ್ಳಿ, ಹಳೇಮೂಡಿಗೆರೆ, ಬೀಜುವಳ್ಳಿ, ಘಟ್ಟದಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮಾತ್ರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
  ಪಟ್ಟಣದಿಂದ ಗೆಂಡೆಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಈದ್ಗಾ ಮೈದಾನದ ಕಾಂಪೌಂಡ್ ಬಳಿ ಇದ್ದ ಮರ ಶನಿವಾರ ರಾತ್ರಿ ರಸ್ತೆಗೆ  ಬಿದ್ದು ಸಂಪರ್ಕ ಕಡಿತಗೊಂಡಿದೆ. ಪಕ್ಕದಲ್ಲಿದ್ದ ವಿದ್ಯುತ್‌ಕಂಬ ತುಂಡಾಗಿ ಬಿದ್ದಿದೆ. ಬಿಳಗುಳ ಗ್ರಾಮದ ವಿವೇಕಾನಂದ ನಗರದಲ್ಲಿ ನಾಲ್ಕೈದು ಮನೆಗಳ ಹೆಂಚು ಮತ್ತು ಶೀಟ್ ಹಾರಿಹೋಗಿವೆ. ಹೆಸಗಲ್ ಕಾಲನಿಯಲ್ಲಿ ಗುಡಿಸಲಿಗೆ ಕಟ್ಟಿದ ಟಾರ್ಪಲ್ ಹಾರಿ ಹೋಗಿದೆ. ಬೇರೆ ಟಾರ್ಪಲ್ ತಂದು ಕಟ್ಟಿದ ಬಳಿಕ ನಿವಾಸಿಗಳು ವಾಸವಾಗಿದ್ದಾರೆ. ಎಂಇಎಸ್ ಶಾಲೆಯ ಛಾವಣಿ ಕುಸಿದಿದೆ. ಪಿ.ಟಿ.ರಸ್ತೆಯಲ್ಲಿ ಮರಬಿದ್ದು ಕಾರಿಗೆ ಹಾನಿಯಾಗಿದೆ. ವಿದ್ಯಾನಗರದಲ್ಲಿ ಗೂಡ್ಸ್ ವಾಹನದ ಮೇಲೆ ಮರದ ರೆಂಬೆ ಬಿದ್ದು ವಾಹನ ಜಖಂಗೊಂಡಿದೆ. ಗೆಂಡೆಹಳ್ಳಿ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.