ತೆಕ್ಕೂರು ವೃತ್ತದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಿರಿಯ ಶ್ರೀಗಳ ಆಪ್ತಸಹಾಯಕ ಶಂ.ನ.ಶೇಷಗಿರಿ ಉದ್ಘಾಟಿಸಿದರು. ಅಂಬಲಮನೆ ಸುಬ್ರಹ್ಮಣ್ಯ, ಡಾ. ಪ್ರಶಾಂತ್ ಇತರರಿದ್ದರು.
- ಉಚಿತವಾಗಿ ಆರೋಗ್ಯ ಸೇವೆ
- ಗ್ರಾಮೀಣ ಪ್ರದೇಶಗಳಿಗೆ ಭೇಟಿ
ಶೃಂಗೇರಿ: ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ, ಜಾಗೃತಿ ಮೂಡಿಸುವ ಸಲುವಾಗಿ ಜಗದ್ಗುರುಗಳ ಆಶಯದಂತೆ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಉಚಿತವಾಗಿ ಆರೋಗ್ಯ ಸೇವೆಯನ್ನು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆ ನೀಡುತ್ತಿದೆ ಎಂದು ಹಿರಿಯ ಶ್ರೀಗಳ ಆಪ್ತಸಹಾಯಕ ಶಂ.ನ.ಶೇಷಗಿರಿ ಹೇಳಿದರು.
ತೆಕ್ಕೂರು ವೃತ್ತದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಲವಾರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನಸಾಮಾನ್ಯರಲ್ಲಿ ಆರೋಗ್ಯ ಅರಿವು ಮೂಡಿಸುವ ಕಾರ್ಯವನ್ನು ಆಸ್ಪತ್ರೆ ವೈದ್ಯರು ಮಾಡುತ್ತಿದ್ದಾರೆ. ಉಚಿತವಾಗಿ ತಜ್ಞ ವೈದ್ಯರ ತಂಡವಿದ್ದು, ಜನರಿಗೆ ಆರೋಗ್ಯದ ಸಲಹೆ ನೀಡುತ್ತಿದ್ದಾರೆ. ಜನಸಾಮಾನ್ಯರು ಇದರ ಸದುಪಯೋಗ ಪಡೆಯಬೇಕು ಎಂದರು.
ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಶ್ರೀ ಭಾರತೀತೀರ್ಥ ಸ್ವಾಮೀಜಿ ಮೊಬೈಲ್ ಆಸ್ಪತ್ರೆಯಿಂದ ಆಯೋಜಿಸಿದ್ದ ಎರಡು ದಿನಗಳ ಕಾಲ ತೆಕ್ಕೂರು ಹಾಗೂ ಸಿದ್ಧರಮಠ ದೇವಾಲಯ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು. 180ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು. ರೋಟರಿ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ, ಡಾ. ಪ್ರಶಾಂತ್ ಇದ್ದರು.