ನರೇಗಾ ಯೋಜನೆಯಡಿ ಹಣ ಪಾವತಿಗೆ ಒತ್ತಾಯಿಸಿ ಕುಂಕಾನಾಡು ಗ್ರಾಪಂ ಕಚೇರಿ ದುರು ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಲಾಯಿತು.
ಕಡೂರು: ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಿಸಿ ಎರಡು ವರ್ಷವಾದರೂ ಹಣ ಸಂದಾಯ ಮಾಡಲು ಗ್ರಾಪಂ ಅಧಿಕಾರಿಗಳು ಅಲೆದಾಡಿಸುತ್ತಿರುವುದ್ನು ಖಂಡಿಸಿ ಯೋಜನೆಯ ಲಾನುಭವಿಗಳು ಕುಂಕನಾಡು ಗ್ರಾಪಂ ಕಚೇರಿ ಎದುರು ಬುಧವಾರ ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು.
ಕುಂಕಾನಾಡು ಗ್ರಾಮಸ್ಥ ಯೋಗೀಶ್ ಮಾತನಾಡಿ, ಗ್ರಾಮದ 12ಕ್ಕೂ ಹೆಚ್ಚು ಜನರು ನರೇಗಾ ಯೋಜನೆಯಡಿ ಕೊಟ್ಟಿಗೆ ಕಟ್ಟಲು ಮಂಜೂರಾತಿ ಪಡೆದುಕೊಂಡು ಕೊಟ್ಟಿಗೆ ನಿರ್ಮಿಸಲಾಗಿದೆ. ಎರಡು ವರ್ಷವಾದರೂ ನರೇಗಾ ಕಾಮಗಾರಿ ಹಣ ಪಾವತಿಯಾಗಿಲ್ಲ. ಹಣ ಪಾವತಿಗೆ ಬೇಕಾದ ಎಲ್ಲ ದಾಖಲೆಗಳನ್ನು ನೀಡಲಾಗಿದೆ. ಕಾಮಗಾರಿ ಕುರಿತು ಎನ್‌ಎಂಆರ್ ಸಹ ಆಗಿದೆ. ಆದರೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ನಮಗೆ ಬರಬೇಕಾದ ಹಣ ಇದುವರೆಗೂ ಬಂದಿಲ್ಲ ಎಂದು ದೂರಿದರು.
ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತಿ ಇಒಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಆರು ತಿಂಗಳಿಗೊಮ್ಮೆ ಪಿಡಿಒ ಬದಲಾಗುತ್ತಾರೆ. ಅಧಿಕಾರಿಗಳು ನಮ್ಮ ಸಮಸ್ಯೆ ಪರಿಹರಿಸಲು ಆಸಕ್ತಿ ವಹಿಸುವುದಿಲ್ಲ. ಆದ್ದರಿಂದ ಶೀಘ್ರ ಹಣ ಬಿಡುಗಡೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ ಎಂದರು.
ಗ್ರಾಪಂಗೆ ಆಗಮಿಸಿದ ತಾಪಂ ಇಒ ಸಿ.ಆರ್.ಪ್ರವೀಣ್ ಅಹವಾಲು ಸ್ವೀಕರಿಸಿ ಮಾತನಾಡಿ, ಗ್ರಾಮದಲ್ಲಿನ ಸುಮಾರು 70ಕ್ಕೂ ಹೆಚ್ಚು ಕಾಮಗಾರಿಗಳು ನರೇಗಾದಡಿ ನಡೆದಿವೆ. ಕೆಲವರು ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಹಂತ ಹಂತವಾಗಿ ಬಿಡುಗಡೆಯಾಗಬೇಕಾದ ಹಣ ಬಿಡುಗಡೆ ಮಾಡದೆ ಎನ್‌ಎಂಆರ್ ಹಣ ಮಾತ್ರ ನೀಡಿದ್ದಾರೆ. ನರೇಗಾ ಕಾಮಗಾರಿಯಡಿ ಬಾಕಿಯಿರುವ ಹಣದ ಬಗ್ಗೆ ಪೂರ್ಣ ಪರಿಶೀಲನೆ ನಡೆಸಿ ಹಣ ಪಾವತಿಗೆ ಕ್ರಮ ಕೈಗೊಳ್ಳುವ ಕುರಿತು ನರೇಗಾ ತಾಲೂಕು ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಒಂದು ವಾರದೊಳಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಲಾನುಭವಿಗಳಿಗೆ ಭರವಸೆ ನೀಡಿದರು.
ನರೇಗಾ ಕಾಮಗಾರಿಯ ಹಣ ಪಾವತಿ ವಿಳಂಬ ಪ್ರಶ್ನಿಸಲು, ಪ್ರತಿಭಟನೆ ಮಾಡಲು ಅವಕಾಶವಿದೆ. ಆದರೆ ಸರ್ಕಾರಿ ಕಚೇರಿಯಲ್ಲಿ ಹಸು ಕಟ್ಟಿ ಕೆಲಸಗಳಿಗೆ ಅಡಚಣೆ ಮಾಡುವುದಕ್ಕೆ ಅವಕಾಶವಿಲ್ಲ. ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ನನ್ನ ಗಮನಕ್ಕೆ ತಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಯಾವುದೇ ತೊಂದರೆ ಮಾಡಬಾರದು ಎಂದು ಹೇಳಿದರು.
ಪಂಚನಹಳ್ಳಿ ಪಿಎಸ್‌ಐ ಅಫ್ರೀದಿ, ನರೇಗಾ ತಾಲೂಕು ಸಹಾಯಕ ನಿರ್ದೇಶಕ ಎ.ಇ.ಕಲ್ಲಪ್ಪ, ಪಿಡಿಒ ಪುಷ್ಪಾ ಇದ್ದರು.