ಚಿಕ್ಕಮಾಗರವಳ್ಳಿ ಗ್ರಾಮದಲ್ಲಿ ಸುಗ್ಗಿ ಹಬ್ಬದ ಹಿನ್ನೆಲೆಯಲ್ಲಿ ದೇವಿರಮ್ಮ ದೇವಸ್ಥಾನದಲ್ಲಿ ದೇವರ ಮೂರ್ತಿಗಳನ್ನು ಅಲಂಕರಿಸಿ ಪೂಜಿಸಿರುವುದು. 
ಚಿಕ್ಕಮಗಳೂರು

ಮಲೆನಾಡಿನಲ್ಲಿ ಸುಗ್ಗಿ ಹಬ್ಬಕ್ಕೆ ಚಾಲನೆ

ಆಲ್ದೂರು: ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸುಗ್ಗಿ ಹಬ್ಬಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಗ್ರಾಮಗಳಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಆಲ್ದೂರು ಸಮೀಪದ ದೊಡ್ಡಮಾಗರವಳ್ಳಿ, ಚಿಕ್ಕಮಾಗರವಳ್ಳಿ, ಹಳಿಯೂರು, ದೊಣಗುಡಿಗೆ, ಹಳೆ ಆಲ್ದೂರು, ಹೊಸಳ್ಳಿ, ತುಡಕೂರು, ಕೆಳಗೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ  ಸೋಮವಾರ ಬೆಳಗ್ಗೆ ಗ್ರಾಮದ ದೇವಿರಮ್ಮನ ದೇವಸ್ಥಾನದಲ್ಲಿ ದೇವಿರಮ್ಮನ ಉತ್ಸವ ಮೂರ್ತಿಯನ್ನು ಉಯಿಲು ಸರಪಳಿಯಲ್ಲಿ ಇಟ್ಟು ತೂಗುವ ಮೂಲಕ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಲಾಯಿತು. 
ಯುಗಾದಿ ಹಬ್ಬ ಕಳೆದು ಬರುವ ಸೋಮವಾರದಿಂದ ಎರಡು ವಾರ ನಡೆಯುವ ಈ ಸುಗ್ಗಿ ಹಬ್ಬವನ್ನು ಕಠಿಣ ವ್ರತದ ಮೂಲಕ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ದೇವಸ್ಥಾನಗಳ ಮುಂದೆ, ಗ್ರಾಮದ ದ್ವಾರ ಬಾಗಿಲುಗಳನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಗ್ರಾಮದ ರಸ್ತೆ ಬದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಗ್ರಾಮದಲ್ಲಿ ಸುಗ್ಗಿ ಸಂಭ್ರಮ ಮನೆ ಮಾಡಿದೆ. ಆಲ್ದೂರು ಸಮೀಪದ ಹವ್ವಳ್ಳಿ ಗ್ರಾಮದಲ್ಲಿ  ಗ್ರಾಮದಲ್ಲಿ ಹಿರಿಯರೊಬ್ಬರು ನಿಧನರಾದ ಕಾರಣ ಸೂತಕದ ಹಿನ್ನಲೆಯಲ್ಲಿ ಸುಗ್ಗಿ ಹಬ್ಬವನ್ನು ಮುಂದೂಡಲಾಗಿದೆ. ಹವ್ವಳ್ಳಿ ಗ್ರಾಮದ ಸುಗ್ಗಿಗೆ  ಸೇರುವ ಎಲ್ಲ ಮನೆಗಳಲ್ಲಿ ಸುಗ್ಗಿ ಆಚರಣೆಯನ್ನು ಮುಂದೂಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು .