ಮಾಗೋಡಿನ ಸುಗ್ಗಿಹಬ್ಬದ ಅಂಗವಾಗಿ ಬಿರೇಕಲ್ಲು ಅಮ್ಮನವರು ಹಾಗೂ ಪರಿವಾರ ದೇವತೆಗಳ ಮೆರವಣಿಗೆ ನಡೆಯಿತು.
ಬಾಳೆಹೊನ್ನೂರು: ಬಿ.ಕಣಬೂರಿನ ಮಾಗೋಡಿನಲ್ಲಿ ಬಿರೇಕಲ್ಲು ಅಮ್ಮನವರು, ಚೋಳರುದೇವರ ಹಾಗೂ ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿ ಹಬ್ಬ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಒಂದು ವಾರದಿಂದ ಚೌತ (ವ್ರತ) ಪ್ರಾರಂಭಿಸಿದ ಗ್ರಾಮಸ್ಥರು ಸಂಭ್ರಮದಿಂದ ಸುಗ್ಗಿ ಪೂಜೆ ಸಲ್ಲಿಸಿದರು. ನಂತರ ಭದ್ರಾ ನದಿಯಲ್ಲಿ ಗಂಗೆ ಪೂಜೆ ಮಾಡಿ ಗಂಗೆಯನ್ನು ದೇವಸ್ಥಾನಕ್ಕೆ ತಂದು ಸುಗ್ಗಿಗದ್ದೆಯಲ್ಲಿ ಬಿದಿರಿನಿಂದ ತಯಾರಿಸಿದ ಹೊಂತೆಯನ್ನು ಹೊತ್ತಿಸಿ ಮತ್ತು ಆರತಿ ಎತ್ತಿಸಿ ಪೂಜೆ ನಡೆಸಲಾಯಿತು.
ಸುಗ್ಗಿ ಅಂಗವಾಗಿ ಹರಕೆ, ದರ್ಶನ ಪಾತ್ರಿಯಿಂದ ಹೇಳಿಕೆ ಕೇಳಿಕೆ ನಡೆಯಿತು. ಸುಗ್ಗಿಹಬ್ಬದಲ್ಲಿ ಹಲಸೂರು, ಕಡ್ಲೇಮಕ್ಕಿ, ಪೇಟೆಕೆರೆ, ಕಣಬೂರು, ಶಾಂತಿನಗರ, ಇಟ್ಟಿಗೆ ಸೀಗೋಡು, ಮೆಣಸುಕುಡಿಗೆ, ಬಾಳೆಹೊನ್ನೂರು, ಮಾಗೋಡು ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಭಾಗವಹಿಸಿ ಮುಡಿಗಂಧ ಪ್ರಸಾದ ಸ್ವೀಕರಿಸಿದರು.