ಚಿಕ್ಕಮಗಳೂರು ಎಸ್‌ಪಿ ಜಿತೇಂಧ್ರ ಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಿದ ಬಿಜೆಪಿ ಮುಖಂಡರು ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ ರೂ.ಗಳ ಹಗರಣ ನಡೆಸಿರುವ ಪ್ರಕರಣವನ್ನು ಸಿಬಿಐ ಅಥವಾ ಇಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಚಿಕ್ಕಮಗಳೂರು: ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ ರೂ.ಗಳ ಹಗರಣ ನಡೆಸಿರುವ ಪ್ರಕರಣವನ್ನು ಸಿಬಿಐ ಅಥವಾ ಇಡಿ ತನಿಖೆಗೆ ಒಪ್ಪಿಸಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ತಕ್ಷಣವೇ ಜಿಲ್ಲಾ ಬಿಜೆಪಿ ಜಾಗೃತಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಬಡವರನ್ನೇ ಗುರಿಯಾಗಿಸಿಕೊಂಡು ನೂರಾರು ಕೋಟಿರೂ. ವಂಚನೆ ನಡೆಸಿದ್ದು, ಈ ಸಂಬಂಧ ಎಸ್ಪಿ ಅವರಿಗೆ ಮನವಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ದಂಧೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಿರುವ ಶಂಖೆಯಿದ್ದು, ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಈಗಾಗಲೇ ೬ ಆರೋಪಿಗಳನ್ನು ಬಂಧಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ. ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದು, ಈ ಪ್ರಕರಣವನ್ನು ಮುಚ್ಚಿಹಾಕುವ ಸಂಶಯಗಳು ವ್ಯಕ್ತವಾಗುತ್ತಿದೆ ಎಂದು ದೂರಿದರು.
ಪ್ರಕರಣದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ, ಕ್ರಿಕೆಟ್ ಬೆಟ್ಟಿಂಗ್ ಹಣ, ಹವಾಲದ ಹಣ ಬಳಕೆಯಾಗಿರುವ ಶಂಖೆಯಿದ್ದು, ಎಸ್‌ಬಿಐ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ, ಹೆಚ್‌ಡಿಎಫ್‌ಸಿ, ಫೆಡರಲ್ ಬ್ಯಾಂಕ್ ಸೇರಿದಂತೆ ಇನ್ನೂ ಅನೇಕ ಬ್ಯಾಂಕುಗಳಲ್ಲಿ ಅಕ್ರಮವಾಗಿ ಖಾತೆಗಳನ್ನು ತೆರೆದು ಒಂದೊಂದು ಖಾತೆಗಳಲಿ ಲಕ್ಷಾಂತರ ರೂ. ವ್ಯವಹಾರ ಮಾಡಲಾಗಿದೆ. ಈ ವ್ಯವಹಾರದಲ್ಲಿ ಬ್ಯಾಂಕು ಸಿಬ್ಬಂದಿ ಬಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದರು.
ಇದೊಂದು ಬಹುಕೋಟಿ ಹಗರಣವಾಗಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಿಬಿಐ ಅಥವಾ ಇಡಿಗೆ ವಹಿಸಬೇಕೆಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಹುಟ್ಟು ಹಬ್ಬದ ಅಂಗವಾಗಿ ಜು.೧೮ ರಂದು ಶನಿವಾರ ವೃದ್ದಾಶ್ರಮ, ಅಂಧಮಕ್ಕಳ ಶಾಲೆ, ಅನಾಥಾಶ್ರಮ, ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ವಿತರಣೆ ಮಾಡಲಾಗುವುದು ಹಾಗೂ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಜಿಲ್ಲಾ ಬಿಜೆಪಿ ನಿರ್ಧರಿಸಿದೆ ಎಂದರು.
ಜಿಲ್ಲೆಯ ಮತದಾರರು ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ಮತಪಟ್ಟಿಯಲ್ಲಿ ಹೆಸರು ಕೈ ತಪ್ಪದಂತೆ ಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ನಗರ ಮಂಡಲ ಅಧ್ಯಕ್ಷ ಕೆ. ಪುಷ್ಪರಾಜು, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್, ವಕ್ತಾರ ಹೆಚ್.ಎಸ್. ಪುಟ್ಟಸ್ವಾಮಿ, ಮುಖಂಡರಾದ ಕೋಟೆ ರಂಗನಾಥ್, ಸಂತೋಷ್ ಕೋಟ್ಯಾನ್, ದಿನೇಶ್, ಸಚಿನ್, ಆಲ್ದೂರು ಶಶಿ ಉಪಸ್ಥಿತರಿದ್ದರು.