ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪದ ತುದಿಯಾಲ ಗ್ರಾಮಕ್ಕೆ ಕಾಫಿ ತೋಟದಲ್ಲಿ ರಸ್ತೆ ನಿರ್ಮಿಸಿರುವುದು. 
ಚಿಕ್ಕಮಗಳೂರು

ಸಾರ್ವಜನಿಕ ರಸ್ತೆ ನಿರ್ಮಾಣಕ್ಕಾಗಿ ತೋಟವನ್ನೇ ಬಿಟ್ಟುಕೊಟ್ಟ ಬೆಳೆಗಾರ

ಮೂಡಿಗೆರೆ: ಸ್ವಂತ ತೋಟದಲ್ಲಿ ಫಸಲು ನೀಡುತ್ತಿದ್ದ ಕಾಫಿಗಿಡಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ.
ಮಾಕೋನಹಳ್ಳಿ ಸಮೀಪದ ತುದಿಯಾಲ ಗ್ರಾಮದಲ್ಲಿ 10 ಕೃಷಿಕ ಕುಟುಂಬಗಳಿಗೆ ಹೊರ ಗ್ರಾಮಗಳ ಸಂಪರ್ಕಕ್ಕೆ ರಸ್ತೆ ವ್ಯವಸ್ಥೆ ಇರಲಿಲ್ಲ. ಕಿರಿದಾದ ಕಾಲುದಾರಿ ಮೂಲಕ ತಿರುಗಾಡುವ ಸ್ಥಿತಿಯಿತ್ತು. ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಹ ಕಿರಿದಾದ ದಾರಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಮತ್ತು ಮೃತ ದೇಹಗಳನ್ನು ಸ್ಮಶಾನಕ್ಕೆ ಜೋಳಿಗೆ ಮೂಲಕ ಕಟ್ಟಿಕೊಂಡು ಸಾಗಿಸಬೇಕಾದ ಸ್ಥಿತಿಯಿತ್ತು. ಈ ಕುಗ್ರಾಮಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ನಿವಾಸಿಗಳಿಗೆ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡಿತ್ತಿದ್ದರೆ ಹೊರತು ಇರುವರೆಗೂ ಭರವಸೆ ಈಡೇರಿಸಿರಲಿಲ್ಲ.
ಗ್ರಾಮಕ್ಕೆ ರಸ್ತೆ ಬಿಡಬೇಕು ಎಂದು 2020ರಲ್ಲಿ ಗ್ರಾಮಸ್ಥರು ಸ್ಥಳೀಯ ತೋಟದ ಮಾಲೀಕ ಎಂ.ಜಿ.ಸತ್ಯ ಅವರಿಗೆ ಮನವಿ ಮಾಡಿದ್ದರು. ಅಂದು ಮಾಕೋನಹಳ್ಳಿ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾರಬೈಲ್ ಗ್ರಾಮದ ಕೆ.ಎನ್.ಪುಟ್ಟರಾಜು ಅವರನ್ನು ಗೆಲ್ಲಿಸಿದರೆ ರಸ್ತೆಗೆ ಜಾಗ ಬಿಟ್ಟು ಕೊಡುವುದಾಗಿ ಎಂ.ಜಿ.ಸತ್ಯ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಗೆಲುವು ಸಾಧಿಸಿದ ನಂತರ ಕೊಟ್ಟ ಮಾತಿನಂತೆ ಎಂ.ಜಿ.ಸತ್ಯ ವಾಹನ ಓಡಾಡುವ ರೀತಿಯಲ್ಲಿ 14 ಅಡಿ ಅಗಲದ ಕಚ್ಚಾ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. 2025 ರಲ್ಲಿ ಕೆ.ಎನ್.ಪುಟ್ಟರಾಜು ಮಾಕೋನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಸಭೆಯಲ್ಲಿ ಕಚ್ಚಾ ರಸ್ತೆಯನ್ನು ಕಾಂಕ್ರಿಟಿಕರಣಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.