ಎನ್.ಆರ್.ಪುರ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಬಿಇಓ ಶಬಾನಾಅಂಜುಮ್ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.  
ಚಿಕ್ಕಮಗಳೂರು

ಪರಿಸರ ಸಮತೋಲನಕ್ಕೆ ಹೆಚ್ಚು ಹಚ್ಚು ಗಿಡಗಳನ್ನು ಬೆಳೆಸಿ

ಎನ್.ಆರ್.ಪುರ: ಪರಿಸರ ಸಮತೋಲನ ಕಾಪಾಡಿಕೊಳ್ಳಲು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರ ನಾಶದಿಂದ ವಾತಾವರಣದಲ್ಲಿ ಅಸಮತೋಲನ ಉಂಟಾಗಿ ಆಮ್ಲಜನಕದ ಕೊರತೆ ಉಂಟಾಗುತ್ತಿದೆ. ಗಿಡ ಬೆಳೆಸುವುದರಿಂದ ಉತ್ತಮ ಮಳೆಯಾಗುತ್ತದೆ. ಪ್ರತಿ ವರ್ಷ ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ ಅವುಗಳನ್ನು ಸಂರಕ್ಷಿಸುವುದು ಅಷ್ಟೇ ಮುಖ್ಯ. ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರ ಬಿಟ್ಟು ಹೋಗಲು, ಗಿಡ ಮರಗಳನ್ನು ಬೆಳೆಸುವುದು ಅವಶ್ಯಕ ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಉದಯ್ ಗಿಲ್ಲಿ ಮಾತನಾಡಿ, ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಪರಿಸರದ ದಿನ ಗಿಡನೆಡುವ ಜತೆಗೆ ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸಲು ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಬೇಕು ಎಂದರು.
ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಮಾತನಾಡಿ, ವಿಶ್ವ ಪರಿಸರದ ದಿನ ಹೆಚ್ಚಿನ ಜಾಗ, ಮೈದಾನ ಇರುವ ಶಾಲೆಗಳಲ್ಲಿ 140 ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಅರಣ್ಯದ ಪ್ರಮಾಣ ಕಡಿಮೆಯಿರುವುದರಿಂದ ಹೆಚ್ಚು ಗಿಡಗಳನ್ನು ಬೆಳೆಸಬೇಕು.ಮಕ್ಕಳಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಭಿನವ ಗಿರಿರಾಜ್, ಪುರುಷೋತ್ತಮ. ಆಸ್ಮಿಯಾ, ಅನಿತಾ, ಸೇವ್ಯಾನಾಯ್ಕಾ, ಶಿಕ್ಷಕರಾದ ನಂಜುಂಡಪ್ಪ, ಸತೀಶ್ ಇದ್ದರು.