ಜಯಂತ್ ಪೈ 
ಚಿಕ್ಕಮಗಳೂರು

ಚಿಕ್ಕಮಗಳೂರಲ್ಲಿ 29ಕ್ಕೆ ಗ್ರಾವೆಲ್ ಫೆಸ್ಟ್ ರಾಷ್ಟ್ರೀಯ ಆಟೋಕ್ರಾಸ್ ಚಾಂಪಿಯನ್‌ಶಿಪ್

ಚಿಕ್ಕಮಗಳೂರು: ಸಗನಿಪುರದಲ್ಲಿ ಮಾ.29ರಂದು ಗ್ರಾವೆಲ್ ಫೆಸ್ಟ್ ರಾಷ್ಟ್ರೀಯ ಆಟೋಕ್ರಾಸ್ ಚಾಂಪಿಯನ್‌ಶಿಪ್ ಅಂತಿಮ ಸುತ್ತು ನಡೆಯಲಿದೆ ಎಂದು ಚಿಕ್ಕಮಗಳೂರು ದಿ ಮೋಟರ್ಸ್‌ ಸ್ಪೋರ್ಟ್ಸ್‌ಕ್ಲಬ್ ಅಧ್ಯಕ್ಷ ಜಯಂತ್ ಪೈ ಮತ್ತು ಕಾರ್ಯದರ್ಶಿ ಅಭಿಜಿತ್ ಪೈ ತಿಳಿಸಿದರು.
ಅಂದು ಬೆಳಗ್ಗೆ 8 ಗಂಟೆಗೆ ಕುರುವಂಗಿ ಗ್ರಾಮದ ಸಗನಿಪುರದಲ್ಲಿ ಆರಂಭವಾಗುವ ಸ್ಪರ್ಧೆಯಲ್ಲಿ ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ವಲಯಗಳಿಂದ ಅರ್ಹತೆ ಪಡೆದ ದೇಶದ ಪ್ರಮುಖ ಆಟೋಕ್ರಾಸ್ ಚಾಲಕರು ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಸಲಿದ್ದಾರೆ. ಸುಮಾರು 30 ಸ್ಪರ್ಧಿಗಳು ವಿವಿಧ ವರ್ಗಗಳಲ್ಲಿ ಪಾಲ್ಗೊಳ್ಳುವರು. ದೆಹಲಿಯ ಫಿಲಿಪೋಸ್ ಮತಾಯಿ ಮತ್ತು ಅರ್ನವ್ ಪ್ರತಾಪ್‌ಸಿಂಗ್, ಬೆಂಗಳೂರಿನ ಚೇತನ್‌ರಾಮ್, ಮೈಸೂರಿನ ರಕ್ಷಿತ್ ಐವರ್ ಮತ್ತು ಸಯ್ಯದ್ ಸಲ್ಮಾನ್, ಗೋವಾದ ವೈಭವ್ ಮರಾಠೆ, ನಾಗಲ್ಯಾಂಡ್‌ನ ಬಾಬಿತ್‌ಲಿಂಗ್ದೋಹ್, ಬಾಂಬೆಯ ಕುಶಾಲ್ ಚೌಧರಿ, ತ್ರಿಶೂರ್‌ನ ಅಲೆಕ್ಸ್ ಕುರುವಿಳ, ಚಿಕ್ಕಮಗಳೂರಿನ ಐಮನ್‌ಅಹ್ಮದ್, ಸಿ.ಪಿ.ಗೌತಮ್, ಅಸದ್ ಪಾಷಾ, ಮಹಿಳಾ ವಿಭಾಗದಲ್ಲಿ ತರುಷಿ ವಿಕ್ರಮ್, ಶಿವಾನಿ ಪೃಥ್ವಿ, ಶ್ರೀಜಿತ್‌ಶೋಮ್, ಶಮೀನಾ, ಪ್ರಾಚಿ ಗಾಯಕ್ವಾಡ್ ಮತ್ತು ಪಲ್ಲವಿಯಾದವ್ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 8 ವರ್ಗಗಳಿದ್ದು, ಆಟೋಕ್ರಾಸ್ ಟ್ವನ್‌ಟ್ರ್ಯಾಕ್ ಮಾದರಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಎರಡು ಕಾರುಗಳು ಒಂದೇ ಸಮಯದಲ್ಲಿ ಪ್ರಾರಂಭಿಸಿ 2.5 ಕಿ.ಮೀ. ಉದ್ದದ ಗ್ರಾವೆಲ್ ಟ್ರ್ಯಾಕ್‌ನಲ್ಲಿ ಸ್ಪರ್ಧಿಸಲಿವೆ. ಟ್ರ್ಯಾಕ್‌ನಲ್ಲಿ ಕ್ರಾಸ್‌ಓವರ್ ಅಂಡರ್‌ಬ್ರಿಡ್ಜ್ ವ್ಯವಸ್ಥೆ ಇರುವುದರಿಂದ ಸ್ಪರ್ಧೆ ಹೆಚ್ಚು ರೋಚಕವಾಗಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಅಂತಿಮ ಸುತ್ತಿನ ಚಾಂಪಿಯನ್‌ಶಿಪ್ ಜತೆಗೆ ಗ್ರಾವೆಲ್‌ಗ್ರೈಂಡ್ ಎಂಬ ಓಪನ್ ಸ್ಟೇಟಸ್ ಆಟೋಕ್ರಾಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು. ಗ್ರಾವೆಲ್‌ಫೆಸ್ಟ್ ದೇಶದಾದ್ಯಂತ ಮೋಟಾರ್ ಸ್ಪೋರ್ಟ್ಸ್ ಅಭಿಮಾನಿಗಳು, ತಂಡಗಳು ಮತ್ತು ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಚಿಕ್ಕಮಗಳೂರು ಮೋಟಾರ್ಸ್‌ ಸ್ಪೋಟ್ಸ್ ಕ್ಲಬ್ ಖಜಾಂಚಿ ದಿಲೀಪ್ ಜೈನ್ ಇದ್ದರು.