ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದ ಶ್ರೀ ಕಟ್ಟೆಹೊಳೆಯಮ್ಮ ಪ್ರೌಢಶಾಲೆಯಲ್ಲಿ ಮಕ್ಕಳ ಗ್ರಾಮಸಭೆಯನ್ನು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಉದ್ಘಾಟಿಸಿದರು 
ಚಿಕ್ಕಮಗಳೂರು

ಸಮಸ್ಯೆ ಬಗೆಹರಿಸಿಕೊಳ್ಳಲು ಗ್ರಾಮಸಭೆ ಪೂರಕ

ಜಿ. ಗಜೇಂದ್ರ
 ಕಡೂರು: ಮಕ್ಕಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಕ್ಕಳ ಗ್ರಾಮಸಭೆ ಪೂರಕ ಎಂದು ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.
ಪಟ್ಟಣಗೆರೆ ಗ್ರಾಮದ ಶ್ರೀ ಕಟ್ಟೆಹೊಳೆಯಮ್ಮ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿ, ಮಕ್ಕಳು ಪಠ್ಯದ ಶಿಕ್ಷಣದ ಜತೆಗೆ ಸಾಮಾಜಿಕ ಕಳಕಳಿಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದರು.
 ಸ್ಥಳೀಯ ಸಮಸ್ಯೆಯನ್ನು ಅನಾವರಣಗೊಳಿಸಿ ಪರಿಹಾರ ಕಂಡುಕೊಳ್ಳಲು ಮಕ್ಕಳಿಗೆ ಸೂಕ್ತ ವೇದಿಕೆ ಅವಶ್ಯ. ಇದರಿಂದ ಮಕ್ಕಳ ಆತ್ಮಸ್ಥೈರ್ಯ ಹೆಚ್ಚುತ್ತದೆ. ಗ್ರಾಮೀಣ ಮಕ್ಕಳು ಪಠ್ಯ ಚಟುವಟಿಕೆಗಳಿಗೆ ಸೀಮಿತಗೊಳ್ಳದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಸಿಎಂಸಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಕ್ಕಳ ಹಕ್ಕುಗಳಲ್ಲಿ ಒಂದಾದ ಭಾಗವಹಿಸುವಿಕೆಯ ಹಕ್ಕನ್ನು ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಮಕ್ಕಳ ಮೂಲಸೌಕರ್ಯ, ರಕ್ಷಣೆಯ ಕುರಿತ ವಿಚಾರಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಸಭೆ ನಡೆಸಲಾಗುತ್ತಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಮುಖ್ಯಶಿಕ್ಷಕ ಧರಣೇಶ್, ಮುಖಂಡರಾದ ವೆಂಕಟೇಶ್, ರಾಜು, ಲೋಕೇಶ್, ರೂಪಾ, ಮಹೇಶ್, ಚಂದನ್, ಆರಾಧ್ಯ, ವಕೀಲರಾದ ಚಂದ್ರಶೇಖರ್, ಕೀರ್ತಿಕೃಷ್ಣ ಹಾಗೂ ಮರಡಿಹಳ್ಳಿ, ಭೋವಿಕಾಲನಿ, ಕುರುಬಗೆರೆ, ಎನ್.ಜಿ.ಕೊಪ್ಪಲು ಗ್ರಾಮದ ಮಕ್ಕಳು ಸಭೆಯಲ್ಲಿ ಭಾಗವಹಿಸಿದ್ದರು.