ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಪಂ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ಸಭೆ ಬಹಿಷ್ಕರಿಸಿದರು. ಸಾಗರ್, ಸತೀಶ್, ಪುಟ್ಟಣ್ಣ, ಸಂತೋಷ್, ರಂಜಿತ್, ನಿಖಿಲ್ ಇತರರಿದ್ದರು.
- ಕುಂದೂರು ಗ್ರಾಪಂ
- ಗ್ರಾಮಸ್ಥರ ಅಸಮಾಧಾನ
ಮೂಡಿಗೆರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಕುಂದೂರು ಗ್ರಾಮ ಪಂಚಾಯಿತಿ ಗ್ರಾಮಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ಸಭೆ ಬಹಿಷ್ಕರಿಸಿದರು.
ಕಂದಾಯ, ಕೃಷಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಸಭೆ ಪ್ರಾರಂಭವಾಗುತ್ತಿದ್ದಂತೆ ಗ್ರಾಮಸ್ಥರು ಎಲ್ಲ ಇಲಾಖೆಗಳ ಅಧಿಕಾರಿಗಳು ಬರುವವರೆಗೂ ಸಭೆ ಪ್ರಾರಂಭಿಸಬಾರದು ಎಂದು ಪಟ್ಟು ಹಿಡಿದರು. ಗ್ರಾಮಸ್ಥರ ಮನವೊಲಿಸಲು ಪಿಡಿಒ ವಾಸುದೇವ್, ನೋಡಲ್ ಅಧಿಕಾರಿ ಪ್ರಯತ್ನಿಸಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಆದರೆ 2 ಗಂಟೆಯಾದರೂ ಅಧಿಕಾರಿಗಳು ಬಾರದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಹೊರನಡೆದರು. ಬಳಿಕ ಗ್ರಾಪಂ ಅಧ್ಯಕ್ಷೆ ರತಿ ನವೀನ್ ಅವರು ಗ್ರಾಮಸಭೆ ಮುಂದೂಡಿದರು.
ಗ್ರಾಮಸ್ಥ ಸಾಗರ್ ಹುಲ್ಲೇಮನೆ ಮಾತನಾಡಿ, ಕುಂದೂರು ಗ್ರಾಪಂ ವ್ಯಾಪ್ತಿಯ ದರ್ಶನ, ಕುಂದೂರು, ಹೆಬ್ಬಾಳಗದ್ದೆ, ಕಾರ್ಲಗದ್ದೆ, ತಳವಾರ, ಹುಲ್ಲೇಮನೆ, ಎಸ್ಟೇಟ್ ಕುಂದೂರು, ಕುಂಡ್ರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ 94 ಸಿ ಹಕ್ಕುಪತ್ರಕ್ಕಾಗಿ ಗ್ರಾಮಸ್ಥರು ಹಲವು ವರ್ಷದಿಂದ ಅರ್ಜಿ ಸಲ್ಲಿಸಿದ್ದರೂ ತಾಲೂಕು ಆಡಳಿತದಿಂದ ಹಕ್ಕುಪತ್ರ ನೀಡಿಲ್ಲ ಎಂದರು.
ಜಮೀನಿನಲ್ಲಿ ಭತ್ತದ ನಾಟಿ ಪ್ರಾರಂಭವಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಬೇಕಾದ ಮಾಹಿತಿ ನೀಡಲು ಅಧಿಕಾರಿಗಳು ಸಭೆಗೆ ಬಂದಿಲ್ಲ. ಹಲವು ರೈತರ ಪಹಣಿ ರದ್ದಾಗಿದೆ. ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿದರೂ ಮುಂದಿನ ಪ್ರಕ್ರಿಯೆ ನಡೆಸಿಲ್ಲ. ಕಾಡುಪ್ರಾಣಿಗಳು ಸತತವಾಗಿ ರೈತರ ಜಮೀನುಗಳಿಗೆ ದಾಳಿ ಮಾಡುತ್ತಿವೆ. ತಳವಾರ, ಹೆಬ್ಬಾಳಗದ್ದೆ ಸೇರಿದಂತೆ ಕೆಲವೆಡೆ ಮಾತ್ರ ಐಬೆಕ್ಸ್ ವಿದ್ಯುತ್ ಬೇಲಿಯನ್ನು ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿದೆ. ಅದರ ನಿರ್ವಹಣೆಯನ್ನು ಅರಣ್ಯ ಇಲಾಖೆ ಮಾಡುತ್ತಿಲ್ಲ. ಇಂಥ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮಸಭೆಯಲ್ಲಿ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು? ಮುಂದಿನ ಗ್ರಾಮಸಭೆಗೆ ಅಧಿಕಾರಿಗಳು ಗೈರಾದರೆ ತಾಲೂಕು ಕೇಂದ್ರದಲ್ಲಿರುವ ಆಯಾ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಸಾಗರ್, ರವಿ ಗೌಡ, ಮಹೇಶ್, ಸತೀಶ್, ಮಂಜುನಾಥ್ ಆಚಾರಿ, ಪುಟ್ಟಣ್ಣ, ಸಂತೋಷ್, ಅನಿಲ್, ಪವನ್, ಬೊಮ್ಮಯ್ಯ, ರಂಜಿತ್, ನಿಖಿಲ್ ಇತರರಿದ್ದರು.