ಕೊಪ್ಪ: ಶೃಂಗೇರಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಫಲಿತಾಂಶ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ಜೆಡಿಎಸ್‌ನ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಎಣಿಕೆ ದಿನದ ಅಂತ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಎನ್.ಜೀವರಾಜ್ ಮರುಎಣಿಕೆಗೆ ಒತ್ತಾಯಿಸಿ ಪತ್ರ ನೀಡಿದ್ದರು. ಆಗ ಶಾಸಕ ಟಿ.ಡಿ. ರಾಜೇಗೌಡ ಮರು ಎಣಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಜೀವರಾಜ್ ನ್ಯಾಯಾಲಯಕ್ಕೆ ತೆರಳಿದ್ದರು. ನ್ಯಾಯಾಲಯ ಮರುಎಣಿಕೆಗೆ ಆದೇಶ ಮಾಡಿತ್ತು. ಅದರಂತೆ ಜೀವರಾಜ್ ಜಯಗಳಿಸಿದ್ದರು. ಈಗ ರಾಜೇಗೌಡರು ಸುಪ್ರೀಂ ಕೋರ್ಟ್ ಮೂಲಕ 21ರವರೆಗೆ ಸ್ಟೇ ತಂದಿದ್ದಾರೆ. 21ರ ಕೋರ್ಟ್‌ನಲ್ಲಿ ಭಾಗವಹಿಸುವಂತೆ ನಮಗೆ ಕೋರ್ಟ್‌ನಿಂದ ನೋಟಿಸ್ ಬಂದಿದೆ. ನಾನು ಈ ಬಗ್ಗೆ ವಕೀಲರನ್ನು ನೇಮಕ ಮಾಡಿದ್ದೇನೆ ಎಂದರು.
ಟ್ಯಾಂಪರಿಂಗ್ ಆಗಿದೆಯೋ, ಆಗಿಲ್ಲ ಎಂದು ಈಗ ಹೇಳಲು ಸಾಧ್ಯವಿಲ್ಲ. ಒಂದು ಕಡೆಯಿಂದ ತಪ್ಪು ನಡೆದಿದೆ. ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಲಿ ಎಂದರು. ಮೇ 21ರಂದು ನ್ಯಾಯಾಲಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಮೈತ್ರಿ ಪಕ್ಷದ ಶಾಸಕರೊಬ್ಬರು ವಿಧಾನಸೌಧಕ್ಕೆ ತೆರಳಿದ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಲು ಸಹಕಾರಿಯಾಗುತ್ತದೆ ಎಂದರು.