ಶರಾವತಿ ಮುಳುಗಡೆ ಸಂತ್ರಸ್ತರು ನೆಲೆಸಿರುವ ಗೋಪಾಲ ಕಾಲನಿ
ತರೀಕೆರೆ: ಸರ್ಕಾರದ ಆದೇಶ, ಬಡತನ, ಅಜ್ಞಾನ ಹೀಗೆ ನಾನಾ ಕಾರಣದಿಂದ ಮನೆ, ಆಸ್ತಿ ಬಿಟ್ಟು ಯೋಜನೆಯೊಂದರ ವಿಶೇಷ ಭೂ ಮಂಜೂರಾತಿ ಪ್ರಾಧಿಕಾರ ಕೊಟ್ಟಷ್ಟೇ ಭೂಮಿ ಪಡೆದು ಅತಂತ್ರರಾಗಿರುವ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಅಡ್ಡಕತ್ತರಿಗೆ ಸಿಲುಕುವಂತಾಗಿದೆ.
ಲಿಂಗನಮಕ್ಕಿಯ ಶರಾವತಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ಗಾಗಿ ನೂರಾರು ಎಕರೆ ಲವತ್ತಾದ ಭೂಮಿ ಬಿಟ್ಟು ಯೋಜನೆ ವಿಶೇಷ ಭೂ ಮಂಜೂರಾತಿ ಪ್ರಾಧಿಕಾರ ಪರ್ಯಾಯವಾಗಿ ಹಂಚಿಕೆ ಮಾಡಿದ ಜಮೀನು ಪಡೆದು ತರೀಕೆರೆ ತಾಲೂಕಿನ ಗೋಪಾಲ ಕಾಲನಿಯಲ್ಲಿ ಆರು ದಶಕಗಳ ಹಿಂದೆ ತಳವೂರಿ ನೆಲೆ ಕಂಡುಕೊಂಡಿದ್ದ ಸಾಗರ, ಹೊಸನಗರ ಮೂಲದ ಶರಾವತಿ ಮುಳುಗಡೆ ಸಂತ್ರಸ್ತರ ಬದುಕುಳಿದ ವಾರಸುದಾರರು ಇದೀಗ ಸ್ವತ್ತಿನ ಮಾಲೀಕತ್ವದ ಹಕ್ಕಿಲ್ಲದೆ ಪರಿತಪಿಸುವಂತಾಗಿದೆ.
ಸಾಗರ, ಹೊಸನಗರ ಕಡೆಯಿಂದ ಸ್ಥಳಾಂತರಗೊಂಡಿದ್ದ 60ಕ್ಕೂ ಹೆಚ್ಚು ಮುಳುಗಡೆ ಸಂತ್ರಸ್ತ ಕುಟುಂಬಕ್ಕೆ ಶರಾವತಿ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ನ ವಿಶೇಷ ಭೂ ಮಂಜೂರಾತಿ ಪ್ರಾಧಿಕಾರದ ಅಧಿಕಾರಿಗಳು ತಾಲೂಕಿನ ಗೋಪಾಲ ಗ್ರಾಮದ ಸರ್ವೇ ನಂ.16, 52 ಹಾಗೂ 85ರಲ್ಲಿ ಹಂಚಿಕೆ ಮಾಡಿದ 500ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಯಲ್ಲಿ ಅಡಕೆ, ಬಾಳೆ, ತೆಂಗು, ಭತ್ತ ಬೆಳೆದು ಸರ್ಕಾರಕ್ಕೆ ಸಲ್ಲಿಸಬೇಕಾದ ಕಂದಾಯವನ್ನು ಸಕಾಲಕ್ಕೆ ಪಾವತಿಸುತ್ತಾ ಬಂದಿದ್ದರೆ. ಅದರೆ ಸಂತ್ರಸ್ತ ಕುಟುಂಬದ ವಾರಸುದಾರರು ಸ್ವತ್ತಿನ ಮೇಲೆ ಮಾಲೀಕತ್ವ ಹೊಂದಲು ಹಿಡಿತ ಸಾಧಿಸಲು ಪೌತಿಖಾತೆ ಪ್ರಕ್ರಿಯೆ ಅಡ್ಡಿಯಾಗಿದೆ.
ಗೋಪಾಲ ಗ್ರಾಮದಲ್ಲಿ ಸ್ವಂತ ಸವಲತ್ತು ಕಲ್ಪಿಸಿಕೊಂಡು ಬದುಕುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರ ಬದುಕುಳಿದ ವಾರಸುದಾರರು ಸದ್ಯ ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಹೆಸರಿನಲ್ಲೇ ಉಳಿದಿರುವ ಸ್ವತ್ತಿನ ಪೌತಿಖಾತೆ ಸಿಗದೆ ಚಿಂತೆಯಲ್ಲಿ ತೊಡಗಿದ್ದರೂ ಐದು ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರಗಳು ನೀಡುತ್ತಿರುವ ಭರವಸೆಗೆ ಆಸೆ ಕಣ್ಣಿನಿಂದ ಎದುರು ನೋಡುವಂತಾಗಿದೆ. ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳಲ್ಲದೆ, ಕಂದಾಯ ಮತ್ತು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಜಂಟಿ ಸಮಾಲೋಚನೆ ನಡೆಸಿ ಗಂಭೀರ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಬೇಕಿದೆ.