ಬುಕ್ಕಾಂಬುದಿಯ ಶ್ರೀ ಪಂಪಾ ವಿರೂಪಾಕ್ಷೇಶ್ವರ ದೇಗುಲದಿಂದ ಉಜ್ಜಯಿನಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಜಗದ್ಗುರುಗಳು ತಪೋಗೈದ ಬೆಟ್ಟದವರೆಗೆ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಬೆಳ್ಳಿ ಪುತ್ಥಳಿ ಮೆರವಣಿಗೆ ನಡೆಸಲಾಯಿತು. 
ಚಿಕ್ಕಮಗಳೂರು

ಮಾನವ ಜನಾಂಗಕ್ಕೆ ದೇವರು ಕೊಟ್ಟ ಕೊಡುಗೆ ಅಪಾರ

ತರೀಕೆರೆ: ಮಾನವ ಜನಾಂಗಕ್ಕೆ ದೇವರು ಕೊಟ್ಟ ಕೊಡುಗೆ ಅಪಾರ. ನಿಂತ ನೆಲ, ಹರಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ಇವುಗಳು ದೇವರ ಕೊಡುಗೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಶ್ರೀ ಕಾಶಿ ಜಗದ್ಗುರುಗಳ ಸಮ್ಮುಖದಲ್ಲಿ ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಗ್ರಾಮದ ಶ್ರೀ ಪಂಪಾ ವಿರೂಪಾಕ್ಷೇಶ್ವರ ದೇಗುಲದಿಂದ ಉಜ್ಜಯಿನಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಜಗದ್ಗುರುಗಳು ತಪೋಗೈದ ಬೆಟ್ಟದವರೆಗೆ ನಡೆಸಿದ ಪರಮ ತಪಸ್ವಿ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಬೆಳ್ಳಿ ಪುತ್ಥಳಿ ಮೆರವಣಿಗೆಗೆ ಪುಷ್ಪಾರ್ಚನೆ ನೆರವೇರಿಸಿ ಚಾಲನೆ ನೀಡಿದ ಬಳಿಕ ಲಿಖಿತ ಆಶೀರ್ವಚನ ನೀಡಿದರು.
ಮನುಷ್ಯ ಅನ್ನ ನೀರಿನಷ್ಟೇ ಮಹತ್ವ ಧರ್ಮ ಪರಿಪಾಲನೆಗೂ ಕೊಡಬೇಕಾದ ಅವಶ್ಯಕತೆ ಇದೆ. ಮನುಷ್ಯ ಹಲವಾರು ವ್ಯಸನಗಳಿಗೆ ಈಡಾಗಿ ಸಂಕಷ್ಟಕ್ಕೀಡಾಗುತ್ತಿದ್ದಾನೆ. ದುರ್ವ್ಯಸನಗಳಿಂದ ಹಲವಾರು ಕುಟುಂಬಗಳು ಬೀದಿಗೆ ಬರುತ್ತಿವೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದರು.
ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಎಲ್ಲರೂ ಸುಖ ಬಯಸುವರೇ ಹೊರತು ಕಷ್ಟ ಯಾರಿಗೂ ಬೇಕಾಗಿಲ್ಲ. ಹೊರಗೆ ಬಡತನವಿದ್ದು ಒಳಗೆ ಸಿರಿತನವಿದ್ದರೆ ಬದುಕು ಬಲು ಸುಂದರವಾದರೆ ಹೊರಗೆ ಸಿರಿತನವಿದ್ದು, ಒಳಗೆ ಬಡತನವಿದ್ದರೆ ಬದುಕಿನ ಬಂಡಿ ಸುಗಮವಾಗಿ ಸಾಗದು. ಹೃದಯ ಶ್ರೀಮಂತಿಕೆಯಿಲ್ಲದೆ ಬುದ್ಧಿ ಶ್ರೀಮಂತಿಕೆ ಎಷ್ಟಿದ್ದರೂ ಪ್ರಯೋಜನವಿಲ್ಲ. ಮರ ನೀರು ಹಾಕಿದವರಿಗೂ ಮರ ಕಡಿದವರಿಗೂ ನೆರಳು, ಹಣ್ಣು ಕೊಡುತ್ತದೆ. ಅದರಂತೆ ಮಹಾತ್ಮರು ಯಾರಿಗೂ ಕೆಡಕು ಬಯಸದೆ ಹಿತ ಬಯಸಿದ್ದಾರೆ ಎಂದರು.
ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಸಂಪತ್ತಿನಿಂದ ಸಿಗುವ ಸುಖ ಸೌಕರ್ಯಗಳು ಬೇಕು. ಆದರೆ ಅವುಗಳನ್ನು ಪಡೆಯಲು ಶ್ರಮ ಮತ್ತು ಸಾಧನೆ ಬೇಡವಾಗಿದೆ. ಅಧರ್ಮದ ದಾರಿಯಲ್ಲಿ ನೂರು ಹೆಜ್ಜೆ ಹಾಕುವುದಕ್ಕಿಂತ ನ್ಯಾಯ, ನೀತಿ ಧರ್ಮ ಮಾರ್ಗದಲ್ಲಿ ನಡೆದರೆ ಒಳ್ಳೆಯದು. ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಶಿವಯೋಗ ಸಾಧನೆ ಮಾಡಿದ ತಪಸ್ಸು ಮತ್ತು ಬೋಧಿಸಿದ ಚಿಂತನೆಗಳು ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.