ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ಪರಿಸರ ವಸ್ತು ಪ್ರದರ್ಶನವನ್ನು ವನ್ಯಜೀವಿ ಛಾಯಾಗ್ರಾಹಕ ಎಚ್.ಎಸ್.ಶಿವಕುಮಾರ್ ಹಿರೇಗೌಜ ಉದ್ಘಾಟಿಸಿದರು. ಎಂ.ಎಲ್ ಅಶೋಕ್, ಕಲಾವಿದರಾದ ಸುರೇಶ್ ಚಂದ್ರ ದತ್ತ, ಡಾ. ಸುಚಿತ್ರ ಕುಮಾರಿ ಇದ್ದರು. 
ಚಿಕ್ಕಮಗಳೂರು

ಪರಿಸರ ಪೂರಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳಿ

ಬಣಕಲ್: ವಿದ್ಯಾರ್ಥಿಗಳು, ಯುವ ಸಮೂಹ ಹೆಚ್ಚು ಹೆಚ್ಚು ಪರಿಸರ ಪೂರಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ವನ್ಯಜೀವಿ ಛಾಯಾಗ್ರಾಹಕ ಎಚ್.ಎಸ್.ಶಿವಕುಮಾರ್ ಹಿರೇಗೌಜ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪರಿಸರ ದಿನಾಚರಣೆ ಹಿನ್ನಲೆಯಲ್ಲಿ ಆಯೋಜಿಸಿದ್ದ ಪರಿಸರ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ತೇಜಸ್ವಿ ಪ್ರತಿಷ್ಠಾನದಲ್ಲಿ ಪರಿಸರ ವಸ್ತು ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಪರಿಸರದಲ್ಲಿ ನಾವು ಕಳೆದುಕೊಂಡಿರುವ ಅನೇಕ ವೈವಿಧ್ಯತೆಯನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ. ತೇಜಸ್ವಿ ಅವರು ಪರಿಸರ ಸಂರಕ್ಷಣೆಯ ಮಹತ್ವವನ್ನು ತಮ್ಮ ಕೃತಿಗಳ ಮೂಲಕ ತಿಳಿಸಿದ್ದಾರೆ. ವಿದ್ಯಾರ್ಥಿಗಳು ತೇಜಸ್ವಿ ಅವರ ಕೃತಿಗಳನ್ನು ಓದುವ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬಹುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ ರಮೇಶ್ ಮಾತನಾಡಿ, ಪರಿಸರ ಸಂರಕ್ಷಿಸುವುದು ಮೊದಲ ಆದ್ಯತೆಯಾಗಬೇಕು. ಪರಿಸರಕ್ಕೆ ಸಂಬಂಧಿಸಿದ ಅಂಚೆ ಚೀಟಿ. ಲಕೋಟೆ, ನಾಣ್ಯ ಮತ್ತು ನೋಟುಗಳನ್ನು ಈ ಪ್ರದರ್ಶನದಲ್ಲಿ ವೀಕ್ಷಿಸುವ ಮೂಲಕ ಪರಿಸರ ಸಂರಕ್ಷಣೆಯ ಅಗತ್ಯತೆ ಮನಗಾಣಬಹುದಾಗಿದೆ. ತೇಜಸ್ವಿ ಪ್ರತಿಷ್ಠಾನ ವಿಶೇಷವಾಗಿ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ವಸ್ತು ಸಂಗ್ರಹಕಾರರಾದ ಎಂ.ಎಲ್ ಅಶೋಕ್ ಮೂಡಿಗೆರೆ, ಕಲಾವಿದರಾದ ಸುರೇಶ್ ಚಂದ್ರ ದತ್ತ, ವಿಜ್ಞಾನಿಗಳಾದ ಡಾ. ಸುಚಿತ್ರ ಕುಮಾರಿ, ಸಾಮಾಜಿಕ ಕಾರ್ಯಕರ್ತ ಸಂಜಯ ಗೌಡ ಕೊಟ್ಟಿಗೆಹಾರ, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ ತರುವೆ ಇದ್ದರು.