ತರೀಕೆರೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ಹಿರಿಯರು ತಪಾಸಣೆ ಮಾಡಿಸಿಕೊಂಡರು.
- ಸ್ವಾವಲಂಬಿ ಜೀವನ
- ಲವಲವಿಕೆಯಿಂದ
ತರೀಕೆರೆ: ಹಿರಿಯರು ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ನೋವುಮುಕ್ತ ನೆಮ್ಮದಿ ಜೀವನ ನಡೆಸಬೇಕು ಎಂದು ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಹೇಳಿದರು.
ಪುರಸಭೆ ಹಾಗೂ ಸಮಾಜಸೇವಾ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕೀಲುಮೂಳೆ ವ್ಯಾಧಿಗಳು ಮತ್ತು ವಯೋಮಿತ್ರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಿರಿಯರ ಆರೋಗ್ಯ ರಕ್ಷಣೆ ಉದ್ದೇಶಕ್ಕೆ ಆಯೋಜಿಸಿರುವ ವೈದ್ಯಕೀಯ ಶಿಬಿರ ಅತ್ಯುಪಯುಕ್ತವಾಗಿದೆ ಎಂದರು.
ಡಾ. ಎಲ್.ಆರ್.ಗೌತಮ್ ಮಾತನಾಡಿ, ವಯಸ್ಸಾದಂತೆ ಹಿರಿಯರಲ್ಲಿ ಹಲವು ಅನಾರೋಗ್ಯ ಕಾಡುವುದು ಸಹಜ. ವಯಸ್ಸಾದ ನಂತರವೂ ಲವಲವಿಕೆಯಿಂದ ಇರಲು, ಸ್ವಾವಲಂಬಿ ಜೀವನ ನಡೆಸಲು ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಈ ಸಂದರ್ಭಗಳಲ್ಲಿ ಇಂಥ ಶಿಬಿರಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ಕುಮಾರ್ ಮಾತನಾಡಿ, ಇಂತಹ ಶಿಬಿರಗಳು ಹಿರಿಯರಿಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರವಲ್ಲ, ವಯೋಸಹಜ ಒಂಟಿತನ ದೂರ ಮಾಡಲು, ಮಾನಸಿಕ ಧೈರ್ಯ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದರು.
ಯೋಗ ತರಬೇತುದಾರೆ ಜ್ಯೋತಿ ಹಿರಿಯರಿಗೆ ಕೀಲು ಮತ್ತು ಮೂಳೆ ರೋಗ ನಿಯಂತ್ರಿಸಲು ನೆರವಾಗಲಿರುವ ವಿವಿಧ ಯೋಗಾಸನ ಕಲಿಸಿಕೊಟ್ಟರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ, ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಎಂ.ಸಿ.ಚನ್ನಬಸಪ್ಪ, ರೋಟರಿ ಕ್ಲಬ್‌ನ ಎಚ್.ಒ.ದಯಾನಂದ್, ಟಿ.ವಿ.ಪ್ರದೀಪ್, ಸಹನಾ, ವೈದ್ಯರಾದ ಕಿಶೋರ್‌ಕುಮಾರ್, ವಿವೇಕಾನಂದ ಬಿರಾದಾರ್, ವಿಜಯಲಕ್ಷ್ಮೀ, ಕಾವ್ಯಶ್ರೀ, ರೇಖಾ ಮತ್ತಿತರರಿದ್ದರು.