ಎನ್.ಆರ್.ಪುರದಲ್ಲಿ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್‌ನಿಂದ ವಿಜಯೋತ್ಸವ ಆಚರಿಸಲಾಯಿತು.  
ಚಿಕ್ಕಮಗಳೂರು

ಗಾಯತ್ರಿ ಶಾಂತೇಗೌಡರ ಗೆಲುವು ಸಂವಿಧಾನಾತ್ಮಕ

ಎನ್.ಆರ್.ಪುರ: ಸುಪ್ರೀಂ ಕೋರ್ಟ್‌ನಲ್ಲಿ ಗಾಯತ್ರಿ ಶಾಂತೇಗೌಡ ತೀರ್ಪು ಪ್ರಕಟವಾದ ಹಿನ್ನಲೆಯಲ್ಲಿ ನೀಡಿದ ಹಿನ್ನೆಲೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಈ ಗೆಲುವು ಸಂವಿಧಾನಾತ್ಮಕ, ಪ್ರಜಾತಂತ್ರದ ಗೆಲುವು. ವಾಮಮಾರ್ಗದ ಮೂಲಕ ಎಂ.ಕೆ.ಪ್ರಾಣೇಶ್ ಗೆಲುವು ಸಾಧಿಸಿದ್ದರು. ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ, ಅವರ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್‌ನಲ್ಲಿ ಗಾಯತ್ರಿ ಶಾಂತೆಗೌಡರ ಪರವಾಗಿ ದಾವೆ ಹೂಡಲಾಗಿತ್ತು. ನಾಮ ನಿರ್ದೇಶಿತ ಸದಸ್ಯರ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಅವರ ಮತಗಳನ್ನು ಬಿಟ್ಟು ಮರು ಮತ ಎಣಿಕೆ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಅದರಂತೆ ಮತಗಳ ಮರುಎಣಿಕೆ ಮಾಡಲಾಗಿತ್ತು. ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಾದ, ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಇಂದು ಗಾಯತ್ರಿ ಶಾಂತೇಗೌಡ ಅವರ ಪರ ತೀರ್ಪು ನೀಡಿದೆ. ಈ ಮೂಲಕ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಸಂದೇಶವನ್ನು ಸಾರಿದೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ನ್ಯಾಯಾಲಯ ಗಾಯತ್ರಿ ಶಾಂತೇಗೌಡರ ಪರ ತೀರ್ಪು ನೀಡಿರುವುದರಿಂದ ಜಿಲ್ಲೆಗೆ ಮತ್ತೊಂದು ಎಂಎಲ್ಸಿ ಸ್ಥಾನ ದೊರಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳಿಗೆ ಶಕ್ತಿ ಬಂದಂತಾಗಿದೆ. ಮುಂಬರುವ ಜಿಪಂ,ತಾಪಂ, ಗ್ರಾಪಂ, ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪರ ತೀರ್ಪು ನೀಡಲಿದ್ದಾರೆ ಎಂದರು.
ತಾಪಂ ಮಾಜಿ ಸದಸ್ಯ ಎಚ್.ಎಂ.ಮನು ಮಾತನಾಡಿ, ಮೊದಲ ಬಾರಿಗೆ ಒಂದೊಂದು ಸ್ಥಾನಕ್ಕೆ ಎರಡೆರಡು ಬಾರಿ ವಿಜಯೋತ್ಸವ ಆಚರಿಸುವಂತಾಗಿದೆ. ಎಂ.ಕೆ.ಪ್ರಾಣೇಶ್ ಅಧಿಕಾರವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮರು ಪರಿಶೀಲನೆ ಮಾಡಿ, ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್‌ಗೌಡ ದಂಡಿನಮಕ್ಕಿ, ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರತನ್‌ಗೌಡ, ಮುಖಂಡರಾದ ಎಂ.ಆರ್.ರವಿಶಂಕರ್, ಈಚಿಕೆರೆ ಸುಂದರೇಶ್, ಬೆನ್ನಿ, ಸಾಜು,ಜುಬೇದಾ, ಸೈಯದ್‌ವಸೀಂ, ಸುನೀಲ್ ಕುಮಾರ್, ಮಾಳೂರುದಿಣ್ಣೆ ರಮೇಶ್, ಬಿಳಾಲ್‌ಮನೆ ಉಪೇಂದ್ರ, ವಿಜಯ್, ಡಿ.ಜಿ.ಮಂಜಪ್ಪಗೌಡ, ಮೂರ್ತಿ, ಎನ್.ಪಿ.ರವಿ, ಎನ್.ಪಿ.ರಮೇಶ್, ದೇವರಾಜ್, ಜಾನ್‌ಪೌಲ್ ಮತ್ತಿತರರು ಇದ್ದರು.