ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ
ಚಿಕ್ಕಮಗಳೂರು: ಕೇಂದ್ರ ಸರ್ಕಾರ ಹೊರಡಿಸಿರುವ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆಯ ವಿರುದ್ಧ ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದ್ದಾರೆ.
ಪರಿಷತ್‌ನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಗಾಯತ್ರಿ ಶಾಂತೇಗೌಡ ಅವರು, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಜಿಲ್ಲೆಗಳ ನೂರಾರು ಜನವಸತಿ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರು, ಕೂಲಿಕಾರ್ಮಿಕರು ಹಾಗೂ ಬಡವರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಹಲವು ಗ್ರಾಮಗಳ ರೈತ ಸಂಘಟನೆಗಳು ಆಕ್ಷೇಪಣೆ ಸಲ್ಲಿಸಿದ್ದು, ನಮೂನೆ ೫೩, ೫೨ ಮತ್ತು ೫೭ರಡಿ ಅರ್ಜಿ ಸಲ್ಲಿಸಿರುವ ರೈತ ಕುಟುಂಬಗಳು ಹಕ್ಕುಪತ್ರಕ್ಕಾಗಿ ಕಾಯುತ್ತಿವೆ. ಜಂಟಿ ಸರ್ವೆ ಕಾರ್ಯವೂ ನಡೆಯುತ್ತಿರುವ ಸಂದರ್ಭದಲ್ಲಿ ಹೊಸದಾಗಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಮಾಡುವ ಕ್ರಮದಿಂದ ಗ್ರಾಮೀಣ ಜನರ ಬದುಕಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಅವರು ಸರ್ಕಾರದ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು, ಮಲೆನಾಡಿನ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಹಿಂದಿನ ನಿಲುವನ್ನು ಮುಂದುವರಿಸಿದ್ದು, ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಜುಲೈ ೨೭ರಂದು ಹೊರಡಿಸಿರುವ ೭ನೇ ಕರಡು ಅಧಿಸೂಚನೆಯನ್ನು ಸದ್ಯ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಪರಿಷತ್‌ಗೆ ತಿಳಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡವು ೨೦೧೩ರಲ್ಲಿ ವರದಿ ಸಲ್ಲಿಸಿದ್ದು, ಪಶ್ಚಿಮ ಘಟ್ಟಗಳ ಸುಮಾರು ೫೬ ಸಾವಿರ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಶಿಫಾರಸು ಮಾಡಿತ್ತು. ಇದರಲ್ಲಿ ಕರ್ನಾಟಕದ ೨೦,೬೬೮ ಚದರ ಕಿ.ಮೀ. ಪ್ರದೇಶವೂ ಸೇರಿದೆ ಎಂದು ಸಚಿವರು ತಿಳಿಸಿದರು.
ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಆಧರಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಹಿಂದೆ ಹಲವು ಕರಡು ಅಧಿಸೂಚನೆಗಳನ್ನು ಹೊರಡಿಸಿತ್ತು. ಅವುಗಳನ್ನು ನಿಗದಿತ ಅವಧಿಯಲ್ಲಿ ಅಂತಿಮಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೊದಲ ಆರು ಕರಡು ಅಧಿಸೂಚನೆಗಳ ಅವಧಿ ಮುಗಿದಿದ್ದು, ಇದೀಗ ಕೇಂದ್ರ ಸರ್ಕಾರವು ಜುಲೈ ೨೭, ೨೦೨೬ರಂದು ೭ನೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ ಎಂದು ಸಚಿವರು ವಿವರಿಸಿದರು.
ಹೊಸ ಕರಡು ಅಧಿಸೂಚನೆಯ ಪ್ರಕಾರ ಕರ್ನಾಟಕದ ೧೦ ಜಿಲ್ಲೆಗಳ ಒಟ್ಟು ೩೯ ತಾಲೂಕುಗಳ ೧,೪೪೯ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಲು ಗುರುತಿಸಲಾಗಿದೆ. ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳು ಈ ಪಟ್ಟಿಯಲ್ಲಿವೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ನಿರ್ದಿಷ್ಟ ಮಿತಿಯನ್ನು ಮೀರಿದ ಕಟ್ಟಡ ನಿರ್ಮಾಣ ಮತ್ತು ಟೌನ್‌ಶಿಪ್ ಅಭಿವೃದ್ಧಿಯಂತಹ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತದೆ. ಆದರೆ ಕೃಷಿ, ನೆಡುತೋಪು ನಿರ್ಮಾಣ ಸೇರಿದಂತೆ ಜನರ ದೈನಂದಿನ ಚಟುವಟಿಕೆಗಳು ಹಾಗೂ ಜೀವನಾಧಾರಗಳ ಮೇಲೆ ನಿರ್ದಿಷ್ಟ ನಿಷೇಧ ಹೇರಲಾಗಿಲ್ಲ. ಹೀಗಾಗಿ ಜನರನ್ನು ಒಕ್ಕಲೆಬ್ಬಿಸುವಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಗುರುತಿಸಿರುವ ಹಲವು ಪ್ರದೇಶಗಳು ಈಗಾಗಲೇ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಸರ್ಕಾರದ ರಕ್ಷಣೆಯಲ್ಲಿವೆ. ಇಂತಹ ಪ್ರದೇಶಗಳ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವುದರಿಂದ ಸಂರಕ್ಷಣೆಯ ಉದ್ದೇಶಗಳಿಗೆ ಪ್ರತಿಕೂಲ ಪರಿಣಾಮ ಬೀರುವುದರ ಜತೆಗೆ ಜನರ ಜೀವನೋಪಾಯಕ್ಕೂ ತೊಂದರೆಯಾಗಬಹುದು ಎಂಬ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಗಳಲ್ಲಿ ಕಸ್ತೂರಿ ರಂಗನ್ ಸಮಿತಿಯ ವರದಿಯ ಅನುಷ್ಠಾನವನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಹೊರಡಿಸಿದ್ದ ಹಿಂದಿನ ಕರಡು ಅಧಿಸೂಚನೆಗಳನ್ನು ತಿರಸ್ಕರಿಸುವ ರಾಜ್ಯದ ಸ್ಪಷ್ಟ ನಿಲುವನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಇದೀಗ ಜುಲೈ ೨೭ರಂದು ಹೊರಡಿಸಿರುವ ೭ನೇ ಕರಡು ಅಧಿಸೂಚನೆಯನ್ನೂ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಕರಡು ಅಧಿಸೂಚನೆ ಕುರಿತು ರಾಜ್ಯ ಸರ್ಕಾರಗಳ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ೬೦ ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.