ಅಬ್ರಾರ್ ಅಹಮದ್ 
ಚಿಕ್ಕಮಗಳೂರು

ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿ

ಮೂಡಿಗೆರೆ: ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಹೊರಡಿಸಿದ ಪ್ರಣಾಳಿಕೆಯಲ್ಲಿ ಮುಸ್ಲಿಮರಿಗೆ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಡೇರಿಸಬೇಕು ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಅಬ್ರಾರ್ ಅಹಮದ್ ಒತ್ತಾಯಿಸಿದರು. 
ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರ 2ಬಿ ಮೀಸಲಾತಿಯನ್ನು ರದ್ದುಪಡಿಸಿತ್ತು. ಅದನ್ನು ಮತ್ತೆ ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಮೀಸಲಾತಿಯನ್ನು ರದ್ದುಪಡಿಸಿರುವುದರಿಂದ ಮುಸ್ಲಿಮರ ವಿದ್ಯಾಭ್ಯಾಸಕ್ಕೆ ಮತ್ತು ವಿದ್ಯಾರ್ಥಿ ವೇತನ ಪಡೆಯಲು ತೊಂದರೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಇಲಾಖೆಗಳ ಉದ್ಯೋಗಕ್ಕೆ ಸೇರಲು ಅಡ್ಡಿಯುಂಟಾಗಿದೆ. ಎಲ್ಲ ವರ್ಗದವರಿಗೂ ಮೀಸಲಾತಿ ಕಲ್ಪಿಸಿ ಮುಸ್ಲಿಮರ ಮೀಸಲಾತಿಯನ್ನು ಮಾತ್ರ ಕಸಿದುಕೊಂಡಿರುವುದು ಸರಿಯಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4.850 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ ಮುಸ್ಲಿಮರಿಗೆ ಶೇ.18ರ ಅನುಪಾತದಲ್ಲಿ 65 ಸಾವಿರ ಕೋಟಿ ರೂ. ವಿವಿಧ ಯೋಜನೆಗಳಿಗೆ ಮೀಸಲಿರಿಸಬೇಕಾಗಿತ್ತು. ಆದರೆ ಮುಸ್ಲಿಮರಿಗೆ ಕೇವಲ 3,600 ಕೋಟಿ ಮೀಸಲಿರಿಸಿ ಅನ್ಯಾಯ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಅನುದಾನವನ್ನೂ ಮುಸ್ಲಿಮರಿಗೆ ನೀಡಲಾಗಿದೆ ಎಂದು ಕೆಲವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸ್ಥಳೀಯ ಶಾಸಕರನ್ನು ನೇಮಿಸಲಾಗುವುದು. ಹೊರಗಿನವರಿಗೆ ಅವಕಾಶ ನೀಡುವುದಿಲ್ಲ ಎಂದು ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಮೂಡಿಗೆರೆಗೆ ಭೇಟಿ ನೀಡಿದ್ದ ವೇಳೆ ಭರವಸೆ ನೀಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕಿ ನಯನಾ ಮೋಟಮ್ಮ ಅವರಿಗೆ ಮಹಿಳಾ ಮತ್ತು ದಲಿತ ಕೋಟಾದಲ್ಲಿ ಸಂಪುಟದಲ್ಲಿ ಅವಕಾಶ ನೀಡಿ ಜಿಲ್ಲಾ ಉಸ್ತುವಾರಿಗೆ ನೇಮಿಸಬೇಕು ಎಂದು ಒತ್ತಾಯಿಸಿದರು.