ಮೂಡಿಗೆರೆ: ಸರ್ಫೇಸಿ ಕಾಯ್ದೆಯ ಪಾಲನೆ ನೆಪದಲ್ಲಿ ಹಿಂಬಾಗಿಲ ಮೂಲಕ ಸಾಲ ವಸೂಲಾತಿಗಿಳಿಗಿರುವ ಬ್ಯಾಂಕ್‌ಗಳು ಭೂಮಾಫಿಯಾದವರೊಂದಿಗೆ ಶಾಮೀಲಾಗಿ ಕಾಫಿ ತೋಟಗಳನ್ನು ಹರಾಜು ಹಾಕುತ್ತಿರುವುದರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಸರ್ಫೇಸಿ ಕಾಯ್ದೆಯನ್ನು ಬಳಸಿಕೊಂಡು ಕೊಡಗಿನ ಕಾಫಿ ತೋಟವೊಂದನ್ನು ಹರಾಜು ಹಾಕಿದ ಪ್ರಕರಣವೊಂದರ ವಿಚಾರಣೆ ಹೈಕೋರ್ಟ್ ನಡೆಸುತ್ತಿರುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸ್ವತಃ ವಿಚಾರಣೆ ನಡೆಸಿದಾಗ ಬ್ಯಾಂಕ್ ಅಧಿಕಾರಿಗಳು ಕಳ್ಳಾಟ ನಡೆಸುತ್ತಿರುವುದು ಬಯಲಾಗಿದೆ. 7 ರಿಂದ 8 ಕೋಟಿ ರೂ. ಬೆಲೆಬಾಳುವ 39 ಎಕರೆ ಕಾಫಿ ತೋಟವನ್ನು ಕೇವಲ 91 ಲಕ್ಷಕ್ಕೆ ಆನ್‌ಲೈನ್ ಮೂಲಕ ಹರಾಜು ಮಾಡಿದ್ದ ಬ್ಯಾಂಕಿನ ಕ್ರಮವನ್ನು ಪ್ರಶ್ನಿಸಿ ಬೆಳೆಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಮತ್ತು ಆನ್‌ಲೈನ್ ಹರಾಜಿನಲ್ಲಿ 39 ಎಕರೆ ಕಾಫಿ ತೋಟವನ್ನು ಪಡೆದಿದ್ದವರ ಕುತಂತ್ರವನ್ನು ಎಳೆಎಳೆಯಾಗಿ ಬಯಲಿಗೆಳೆದ ಹೈಕೋರ್ಟ್ ನ್ಯಾಯಮೂರ್ತಿ ಭೂಮಾಫಿಯಾಗಳಿಗೆ ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ತಪ್ಪು ಮಾಹಿತಿ ನೀಡಿ ಶುದ್ಧ ಕ್ರಯಪತ್ರ ತಯಾರಿಸಿ ವಂಚಿಸಲು ಯತ್ನಿಸಿರುವ ಎಲ್ಲ ದಾಖಲೆಯನ್ನು ಹೈಕೋರ್ಟ್‌ಗೆ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
ಕೊಡಗಿನಲ್ಲಿ ನಡೆದಿರುವ ಇದೊಂದು ಪ್ರಕರಣ ಮಾತ್ರವಲ್ಲದೆ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂತಹ ನೂರಾರು ಪ್ರಕರಣಗಳಲ್ಲಿ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ನ್ಯಾಯಾಲಯ ಬ್ಯಾಂಕ್‌ಗಳಿಗೆ ಸರಿಯಾದ ಚಾಟಿ ಬೀಸಿದೆ. ನ್ಯಾಯಾಲಯ ಈ ಕುರಿತು ಕಠಿಣ ನಿಲುವು ತಾಳಿರುವುದು ಸ್ವಾಗತಾರ್ಹ ಬೆಳವಣಿಗೆ. ಇದು ಕಾಫಿ ಬೆಳಗಾರರಿಗೆ ವರದಾನವಾಗಿದೆ. ಇದುವರೆಗೂ ಬ್ಯಾಂಕ್ ಹರಾಜು ಮಾಡಿರುವ ಹಾಗೂ ಹರಾಜು ಮಾಡಲು ಹೊರಟಿರುವ ಎಲ್ಲ ಪ್ರಕರಣಗಳ ಮರುಪರಿಶೀಲನೆ ನಡೆಯಬೇಕು. ಸ್ಥಳೀಯ ವ್ಯಾಲ್ಯೂಯೇಟರ್‌ಗಳು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಅಕ್ರಮ ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.