ಬೀರೂರಿನಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಶ್ರೀ ಶೈಲ ಪೀಠಾಧೀಶ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ವಿವಿಧ ಮಠದ ಶ್ರೀಗಳು, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬೆಳ್ಳಿಪ್ರಕಾಶ್ ಇತರರಿದ್ದರು. 
ಚಿಕ್ಕಮಗಳೂರು

ತಪ್ಪನ್ನು ಕ್ಷಮಿಸುವುದು ಮನುಷ್ಯನ ಆದರ್ಶ ಗುಣ

ಬೀರೂರು: ಪರಮಾತ್ಮ ನೀಡಿರುವ ಕೊಡುಗೆಗಳಲ್ಲಿ ಈ ಜಗತ್ತು ಕೂಡ ಒಂದು. ಆರಾಧಿಸುವ ಕರ್ತವ್ಯ ಮಾತ್ರ ನಮ್ಮದು. ತಪ್ಪಿಗೆ ಪ್ರಾಯಶ್ಚಿತ್ತ  ಮಾಡಿಕೊಳ್ಳುವುದು ಹಾಗೂ ಅನ್ಯರ ತಪ್ಪನ್ನು ಕ್ಷಮಿಸುವ ಮೂಲಕ ಆದರ್ಶ ಗುಣಗಳನ್ನು ಮೆರೆಯಬೇಕು ಎಂದು ಶ್ರೀ ಶೈಲ ಪೀಠಾಧೀಶ್ವರ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ಡಿ.ವಿ.ಹಾಲಪ್ಪ ರಸ್ತೆಯ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಧರ್ಮ ಮತ್ತು ಸಂಸ್ಕೃತಿ ನಮ್ಮ ಪರಂಪರೆಯಾಗಿದ್ದು ಅದನ್ನು ಉಳಿಸಿ ಬೆಳೆಸಿ ರಕ್ಷಿಸುವ ಮೂಲಕ ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು. ಧರ್ಮ ಏನೆಂಬುದರ ಪ್ರಶ್ನೆಗೆ ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಪೂಜೆ, ದಾನ, ದಯೆ, ಕ್ಷಮೆ, ಜಪ ಮತ್ತು ಧ್ಯಾನವೆಂಬ ದಶಗುಣಗಳ ಒಟ್ಟು ಮೌಲ್ಯವೇ ಧರ್ಮವಾಗಿದೆ ಎಂದು ವಿಶ್ಲೇಷಿಸಿದರು.
ಪರಮಾತ್ಮನಿಂದ ವ್ಯಾಪಿಸಿರುವ ಜಗತ್ತಿನಲ್ಲಿ ನಾನು ನನ್ನದು ಎನ್ನುವ ಮೋಹಕ್ಕೆ ಒಳಗಾಗದೆ ಶ್ರದ್ಧೆ ಮತ್ತು ಮನಃಪೂರ್ವಕವಾಗಿ ಭಗವಂತನನ್ನು ಆರಾಧಿಸಬೇಕು. ಪೂಜೆಗೆ ಭಕ್ತಿ ಮುಖ್ಯವಾದರೂ ಸಾಕಾರಸ್ವರೂಪಿ ಪದಾರ್ಥಗಳ ಅರ್ಪಣೆಯ ಮೂಲಕ ದೇವರನ್ನು ಅರ್ಚಿಸುವುದು ತ್ಯಾಗದ ಸಂಕೇತವೂ ಆಗಿದೆ. ಪರಿಪೂರ್ಣ ಶ್ರದ್ಧೆಯ ಸಮರ್ಪಣೆಯೇ ಮೋಕ್ಷಕ್ಕೆ ದಾರಿ. ಇಷ್ಟಲಿಂಗ ಪೂಜೆ, ಶಿವಾರಾಧನೆಯು ಸಾಧನೆಯ ಹಾದಿಯಾಗಿದೆ ಎಂದು ವಿವರಿಸಿದ ಅವರು, ಬೀರೂರಿನ ಜನರು ಗುರು ಮತ್ತು ದೈವ ಎರಡನ್ನೂ ಇಲ್ಲಿಗೆ ಕರೆಸಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಶ್ರೀ ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಪರಂಪರೆಯು ಶಾಖಾ ಮಠಗಳ ಸ್ಥಾಪನೆಯ ಮೂಲಕ ಪೀಠಗಳ ಅಧಿಕಾರ ವಿಕೇಂದ್ರೀಕರಣಕ್ಕೆ ಮಾದರಿಯಾಗಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಪರಂಪರೆಯ ಪಂಚಪೀಠಗಳು ಮಾನವನ ಉನ್ನತಿಗೆ ಶ್ರಮಿಸುವ ಮೂಲಕ ಒಳಿತಿನ ಸಂಸ್ಕೃತಿಯ ಪ್ರತೀಕವಾಗಿವೆ. ನಾಡಿನ ಒಳಿತಿಗಾಗಿ, ಯುವಜನರಲ್ಲಿ ಸಂಸ್ಕಾರ, ಕೌಟುಂಬಿಕ ಪ್ರಜ್ಞೆ ಮತ್ತು ಕಂಕಣಭಾಗ್ಯ ಒದಗಿಬರಲಿ ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಶ್ರೀ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದೀಪುರ ನಂದೀಶ್ವರ ಶಿವಾಚಾರ್ಯ ಶ್ರೀ, ಹಣ್ಣೆಮಠದ ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮುಖಂಡ ಕೆ.ಎಂ.ವಿನಾಯಕ, ಆರ್ಯನ್, ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘ, ಶಿವಾನಂದಾಶ್ರಮ ಟ್ರಸ್ಟ್, ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರದ ಪದಾಧಿಕಾರಿಗಳು, ಭಕ್ತರು ಇದ್ದರು.