ಕಳಸ: ಕಳಸ ತಾಲೂಕಿನ ಜಾನಪದ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಮಲೆನಾಡಿನ ಜನಜೀವನದ ವೈವಿಧ್ಯತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಜಾನಪದ ಪರಿಷತ್ನ ಆಶ್ರಯದಲ್ಲಿ ಡಿಸೆಂಬರ್ 20ರಂದು ಕಳಸ ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ.
ಪಟ್ಟಣದ ಅರಮನೆಮಕ್ಕಿ ದಕ್ಷಿಣ ಕಾಶಿ ಸಭಾ ಭವನದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಭಾನುವಾರ ಸಮ್ಮೇಳನಾಧ್ಯಕ್ಷರ ಮನೆಗೆ ತೆರಳಿದ ಪರಿಷತ್ನ ಪದಾಧಿಕಾರಿಗಳು ಅಧಿಕೃತ ಆಹ್ವಾನ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು. ನಂತರ ಸಾಯಿ ಮಂದಿರದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಲಾಯಿತು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಜಾನಪದ ಪರಿಷತ್ನ ಅಧ್ಯಕ್ಷ ರಜಿತ್ ಕೆಳಗೂರು ಮಾತನಾಡಿ, ಕಳಸ ತಾಲೂಕಿನಲ್ಲಿ ಪ್ರಥಮ ಬಾರಿಗೆ ಜಾನಪದ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ತಾಲೂಕಿನ ಜನಪದ ಸಂಸಕ್ಕತಿಯ ಶ್ರೀಮಂತಿಕೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಆಶಯ ಹೊಂದಲಾಗಿದೆ ಎಂದರು.
ಸಮ್ಮೇಳನದ ದಿನ ಬೆಳಗ್ಗೆ ವಿವಿಧ ಜಾನಪದ ಕಲಾ ಪ್ರಕಾರಗಳು, ಸಾಂಸ್ಕೃತಿಕ ವೈಭವವನ್ನು ಸಾರುವ ಮೆರವಣಿಗೆ ನಡೆಯಲಿದ್ದು, 25ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಮೆರವಣಿಗೆಯ ಆಕರ್ಷಣೆಯಾಗಲಿವೆ. ಮಲೆನಾಡಿನ ಸಾಂಪ್ರದಾಯಿಕ ಬದುಕು, ಆಚರಣೆ, ಕಲೆ ಹಾಗೂ ಜನಪದ ಸೊಗಡನ್ನು ಬಿಂಬಿಸುವ ಹಲವು ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ದಿನವಿಡೀ ನಡೆಯಲಿರುವ ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭ, ಎರಡು ವಿಚಾರಗೋಷ್ಠಿಗಳು, ಸಮಾರೋಪ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಲೆ ಮಾರುಗಳಿಂದ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಸ್ಥಳೀಯ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವೂ ಇರಲಿದೆ. ಮಲೆನಾಡಿನ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಮಳಿಗೆಗಳು, ಪುಸ್ತಕ ಮಳಿಗೆಗಳು ಕೂಡ ಸಮ್ಮೇಳನದ ವಿಶೇಷ ಆಕರ್ಷಣೆ. ಸಮ್ಮೇಳನದ ಯಶಸ್ವಿಗೆ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದ್ದು, ವಿಶ್ವನಾಥ ಮರಸಣಿಗೆ ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ವಿಶ್ವನಾಥ್, ಕನ್ನಡ ಸಾಹಿತ್ಯ ಪರಿಷತ್ನ ಕಳಸ ತಾಲೂಕು ಅಧ್ಯಕ್ಷ ಸತೀಚಂದ್ರ, ಕರ್ನಾಟಕ ಜಾನಪದ ಪರಿಷತ್ನ ಕಾರ್ಯದರ್ಶಿ ಎಚ್.ಆರ್. ಪ್ರಶಾಂತ್, ಮಮ್ತಾಜ್ ಬೇಗಂ, ಸುಜಯಾ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.