ಕೊಪ್ಪ ಹೊರವಲಯ ಸಿಗದಾಳು ಘಾಟಿಯಲ್ಲಿ ವ್ಯಕ್ತಿಯೋರ್ವ ಕಸ ಎಸೆಯುತ್ತಿರುವುದು.
ಕೊಪ್ಪ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಪಪಂ ನಮ್ಮ ಕೊಪ್ಪ ಸ್ವಚ್ಛ ಕೊಪ್ಪ ಯೋಜನೆ ಜಾರಿಗೊಳಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ವಿಧಿಸುವುದು ಹಾಗೂ ಕಸ ಎಸೆಯುವವರ ವಿಡಿಯೋ ಸೆರೆ ಮಾಡಿದವರಿಗೆ ಬಹುಮಾನ ನೀಡುವುದಾಗಿ ತಿಳಿಸಿದೆ.
ಕೊಪ್ಪ ಪಟ್ಟಣ ಸಂಪರ್ಕಿಸುವ ಸಿಗಾದಳು ಘಾಟಿ, ಕುಂಚೂರು ಘಾಟಿ, ಬಾಳಗಡಿ, ರಾಘವೇಂದ್ರನಗರ ಹಾಗೂ ಅಮ್ಮಡಿ ಬಳಿಯ ರಸ್ತೆಯ ಇಕ್ಕೆಲಗಳಲ್ಲಿ ಕಸವನ್ನು ತಂದು ಸುರಿಯಲಾಗಿತ್ತು. ಕಳೆದ ತಿಂಗಳಿನಲ್ಲಿ ಪಪಂ ನೇತೃತ್ವದಲ್ಲಿ ಹಲವೆಡೆ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು. ನಿರೀಕ್ಷೆಗೂ ಮೀರಿ ಪಟ್ಟಣದ ಜನತೆ ಬೆಂಬಲ ನೀಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಸ್ವಚ್ಛತೆ ಬಗ್ಗೆ ತಾಲೂಕು ಆಡಳಿತ, ಸಾರ್ವಜನಿಕರು ಕಾಳಜಿ ವಹಿಸುತ್ತಿರುವುದರ ಜತೆ ನಮ್ಮ ಕೊಪ್ಪ ಸ್ವಚ್ಛ ಕೊಪ್ಪ ಯೋಜನೆಗೆ ವಿವಿಧ ಕಾರ್ಯ ತಂತ್ರವನ್ನು ರೂಪಿಸುತ್ತಿದ್ದರೆ, ಇದೇ ವೇಳೆಯಲ್ಲಿ ಬುಧವಾರ ಪಟ್ಟಣದ ಹೊರವಲಯದ ಹುಲ್ಲುಮಕ್ಕಿಯಲ್ಲಿ ಸ್ಕೂಟಿಯಲ್ಲಿ ಬಂದ ದಂಪತಿ ಕಸವನ್ನು ಎಸೆದು ಹೋಗಿರುವುದು ಹಾಗೂ ಸಿಗದಾಳು ಘಾಟಿಯಲ್ಲಿ ವ್ಯಾಪಾರಸ್ಥನೊಬ್ಬ ಕಾರಿನಲ್ಲಿ ಬಂದು ಕಸ ಎಸೆಯುವ ವಿಡಿಯೋ ವೈರಲ್ ಆಗಿದೆ. ಕಸ ಎಸೆದವರನ್ನು ಅಡ್ಡಗಟ್ಟಿ ಮತ್ತೆ ಕಸವನ್ನು ಎತ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಲಿಖಿತಾ ಮಹೋನ್ ವಿಜಯವಾಣಿಯೊಂದಿಗೆ ಮಾತನಾಡಿ, ನಮ್ಮ ಕೊಪ್ಪ ಸ್ವಚ್ಛ ಕೊಪ್ಪ ಮಾಡಲು ನಾವು ಶ್ರಮ ವಹಿಸುತ್ತಿದ್ದೇವೆ. ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಇಲಾಖೆ, ಸಾರ್ವಜನಿಕರು ನಮ್ಮ ಜತೆಯಲ್ಲಿ ಕೈ ಜೋಡಿಸಿದ್ದಾರೆ. ಆದರೆ ಕೆಲವರು ಇನ್ನೂ ಕೂಡ ರಸ್ತೆ ಬದಿ ಕಸ ಎಸೆಯುತ್ತಿದ್ದಾರೆ. ಎರಡು ವಿಡಿಯೋ ವೈರಲ್ ಆಗಿದೆ. ಕೊಪ್ಪ ಠಾಣಾಧಿಕಾರಿಗೆ ವೈರಲ್ ಆಗಿರುವ ವಿಡಿಯೋದಲ್ಲಿರುವವರನ್ನು ಗುರುತಿಸಿ ದಂಡ ವಿಧಿಸಲು ಸೂಚಿಸಿದ್ದೇನೆ. ರಸ್ತೆ ಬದಿ ಕಸ ಎಸೆಯುವವರ ವಿಡಿಯೋ ಮಾಡಿ ಕೊಟ್ಟವರಿಗೆ ಪಟ್ಟಣ ಪಂಚಾಯಿತಿಯಿಂದ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.