ಫುಟ್‌ಪಾತ್ ಮೇಲೆ ನಿಲ್ಲಿಸಿದ ಪ್ರವಾಸಿಗರ ವಾಹನ.
ಕಳಸ: ಪಟ್ಟಣದ ಮುಖ್ಯ ರಸ್ತೆಯ ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸಿದ್ದ ಪ್ರವಾಸಿಗರು ಅದನ್ನು ಪ್ರಶ್ನಿಸಿದ ಸ್ಥಳೀಯರೊಂದಿಗೆ ವಾಗ್ವಾದಕ್ಕೆ ಇಳಿದು ಕೊನೆಗೆ ದಂಡ ಕಟ್ಟಿದ್ದಾರೆ.
ಜೀಪ್‌ನಲ್ಲಿ ಆಗಮಿಸಿದ ಪ್ರವಾಸಿಗರ ಗುಂಪೊಂದು ಜೀಪನ್ನು ಮುಖ್ಯ ರಸ್ತೆಯ ನೋಪಾರ್ಕಿಂಗ್ ವಲಯದ ಫುಟ್‌ಪಾತ್ ಮೇಲೆ ನಿಲ್ಲಿಸಿದ್ದರು. ಇದು ಪಾದಚಾರಿಗಳು ಮತ್ತು ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿತ್ತು. ಪರಿಸ್ಥಿತಿ ಗಮನಿಸಿದ ಸ್ಥಳೀಯ ನಿವಾಸಿಗಳು ವಾಹನ ಸವಾರರನ್ನು ಸಂಪರ್ಕಿಸಿ ಫುಟ್‌ಪಾತ್ ಪಾದಚಾರಿಗಳ ಓಡಾಟಕ್ಕೆ ಮೀಸಲಾಗಿದೆ ಮತ್ತು ಇದು ರಾಂಗ್ ಸೈಡ್ ಪಾರ್ಕಿಂಗ್ ಆಗಿದೆ. ಕೂಡಲೇ ವಾಹನ ಬೇರೆಡೆ ನಿಲ್ಲಿಸಿ ಎಂದು ವಿನಂತಿಸಿದ್ದಾರೆ. ಆದರೆ ಸ್ಥಳೀಯರ ಮಾತನ್ನು ಕೇಳದ ಪ್ರವಾಸಿಗರು, ನಾವು ಆಡಿದ್ದೇ ಆಟ ಎಂದು ವರ್ತಿಸಿದ್ದಾರೆ. ಕೂಡಲೇ ಪೊಲೀಸರು ಬಂದು ಜೀಪ್ ಟೈರ್‌ಗೆ ಲಾಕ್ ಹಾಕಿದ್ದಾರೆ. ಆದರೆ ಪ್ರವಾಸಿಗರು ತಪ್ಪನ್ನು ಒಪ್ಪಿಕೊಳ್ಳುವ ಬದಲು ಸ್ಥಳೀಯರ ಮೇಲೆ ಗದರಿದ್ದಾರೆ. ಪ್ರವಾಸಿಗರು ಉದ್ಧಟತನದಿಂದ ವರ್ತಿಸಿ ಸ್ಥಳೀಯರೊಂದಿಗೆ ವಾಗ್ವಾದಕ್ಕೆ ಇಳಿದರು. ಸ್ಥಳಕ್ಕೆ ಬಂದ ಪೊಲೀಸರು ಸಂಚಾರ ನಿಯಮಗಳನ್ನು ಸ್ಪಷ್ಟ್ಟಪಡಿಸಿ ನಿಯಮ ಉಲ್ಲಂಸಿ ಫುಟ್‌ಪಾತ್ ಮೇಲೆ ರಾಂಗ್‌ಸೈಡ್ ಪಾರ್ಕಿಂಗ್ ಮಾಡಿದ್ದಕ್ಕಾಗಿ ಪ್ರವಾಸಿಗರಿಗೆ ದಂಡ ವಿಧಿಸಿದರು ಮತ್ತು ವಾಹನವನ್ನು ತಕ್ಷಣ ಸ್ಥಳದಿಂದ ತೆರವುಗೊಳಿಸಿದರು. ಕೂಡಲೇ ಬಂದು ಕ್ರಮ ಕೈಗೊಂಡ ಪೊಲೀಸರ ಕ್ರಮವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
ನಿಯಮ ಉಲ್ಲಂಸುವ ಪ್ರವಾಸಿಗರು ಸ್ಥಳೀಯರಿಗೆ ತೊಂದರೆ ಕೊಡುತ್ತಿರುವುದು ಇದೇ ಮೊದಲಲ್ಲ. ಇಂಥ ಘಟನೆಗಳ ಪುನರಾವರ್ತನೆ ತಪ್ಪಿಸಲು ಪೊಲೀಸರು ಮತ್ತು ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.