ಕಡೂರು ಎಪಿಎಂಸಿ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ರಾಗಿ ಖರೀದಿ ಮಾಡುತ್ತಿರುವುದು. 
ಚಿಕ್ಕಮಗಳೂರು

ಮೂರು ತಿಂಗಳಾದರೂ ರೈತರ ಕೈಸೇರದ ರಾಗಿ ಹಣ

ಪಂಚನಹಳ್ಳಿ: ಚಿಕ್ಕಮಗಳೂರು ಜಿಲ್ಲೆಯ ಬಯಲು ಭಾಗದಲ್ಲಿ ಮಳೆ ಬಾರದೆ ಬೆಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಇತ್ತ ರಾಗಿ ಮಾರಿದ ಹಣವೂ ಕೈ ಸೇರದಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಜಿಲ್ಲೆಯ 7477 ರೈತರಿಂದ ಖರೀದಿ ಮಾಡಿದ ರಾಗಿ ಹಣ ಪಾವತಿಸದೆ 84.75 ಕೋಟಿ.ರೂ. ಬಾಕಿಉಳಿಸಿಕೊಂಡಿದೆ.
ರೈತರು ಮಾತ್ರ ಹಣ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಪ್ರತಿದಿನ ಬ್ಯಾಂಕ್‌ಗೆ ಹೋಗಿ ಕಾಯುತ್ತಿದ್ದಾರೆ. ಅದರೆ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಮೂಗಿಗೆ ತುಪ್ಪ ಸವರಿ ಇಂದು ನಾಳೆ ಎಂದು ದಿನ ಕಳೆಯುತ್ತಿದ್ದಾರೆ. ಇನ್ನು ಕೆಲವು ಮೇಲಾಧಿಕಾರಿಗಳು ಇದರಲ್ಲಿ ನಮ್ಮದೇನಿಲ್ಲ ಎಂದು ಸರ್ಕಾರದತ್ತ ಬೆರಳು ತೋರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಈ ವರ್ಷದ ಪ್ರಾರಂಭದಿಂದಲೇ ನೋಂದಣಿ ಪ್ರಾರಂಭಿಸಿ ಫೆಬ್ರವರಿ 20 ರಿಂದ ಮೇ 10ರ ವರೆಗೆ ಜಿಲ್ಲೆಯ ಚಿಕ್ಕಮಗಳೂರು, ಕಡೂರು, ಬೀರೂರು, ಪಂಚನಹಳ್ಳಿ, ತರೀಕೆರೆ ಹಾಗೂ ಅಜ್ಜಂಪುರ ಭಾಗಗಳ ಒಟ್ಟು 7 ರಾಗಿ ಖರೀದಿ ಕೇಂದ್ರಗಳ ಮೂಲಕ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಿತ್ತು.
ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಮಾಡಿದ ಸರ್ಕಾರ ಮೂರು ತಿಂಗಳಾದರೂ ಸಹ ಬೆಂಬಲ ಬೆಲೆ ಹಣವನ್ನು ರೈತರ ಖಾತೆಗೆ ಜಮಾ ಮಾಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ರಾಗಿ ಬೆಳೆದು ಖರೀದಿ ಕೇಂದ್ರಕ್ಕೆ ತಂದು ಹಾಕಿದರೂ ಹಣ ಬಾರದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಬಹಳಷ್ಟು ರೈತರು ಕಳೆದ ವರ್ಷ ಕೃಷಿಯಲ್ಲಿ ಉತ್ಪಾದಿಸಿದ ಬೇಳೆ ಕಾಳುಗಳನ್ನು ಮಾರುಕಟ್ಟೆಯಲ್ಲಿ ಮಾರಿ ಮುಂದಿನ ವರ್ಷದ ಕೃಷಿ ಚಟುವಟಿಕೆಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಖರೀದಿ, ಉಳಿಮೆಗೆ ಹಣ ಬಳಸಿಕೊಳ್ಳುತ್ತಾರೆ. ಬೆಂಬಲ ಬೆಲೆಯ ಹೆಚ್ಚಿನ ಆದಾಯದ ಆಸೆ ಬಿದ್ದು ರೈತರು ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಿದ್ದಾರೆ. ಅದರೆ ಸರ್ಕಾರ ಮಾತ್ರ ಈವರೆಗೂ ಹಣ ಬಿಡುಗಡೆ ಮಾಡಿಲ್ಲ.