ಮೋಟಮ್ಮ 
ಚಿಕ್ಕಮಗಳೂರು

ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿ ಸಹಿಸದೆ ಸುಳ್ಳು ಆರೋಪ

ಮೂಡಿಗೆರೆ: ಮೂಡಿಗೆರೆ ಕ್ಷೇತ್ರದಲ್ಲಿ ನಯನಾ ಮೋಟಮ್ಮ ಶಾಸಕರಾದ ನಂತರ ಕ್ಷೇತ್ರದಲ್ಲಿ ಹೆಚ್ಚಿನ ಕಾಮಗಾರಿ ನಡೆದಿದೆ ಅಭಿವೃದ್ಧಿ ಸಹಿಸದೆ ಹತಾಶೆಯಿಂದ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಉರುಳಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೀಪಕ್ ದೊಡ್ಡಯ್ಯ ಅವರು ಜನರಿಂದ ತಿರಸ್ಕೃತವಾದ ಬಳಿಕ ಹತಾಶೆಯಿಂದ ಶಾಸಕರು ವಿರುದ್ಧ ಇಂತಹ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯೋಜನಕ್ಕೆ ಬಾರದ ಹೇಳಿಕೆ ನೀಡಿ ಬಿಜೆಪಿ ನಾಯಕರನ್ನು ಓಲೈಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಬೇರೆ ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ. ಈ ವಿಚಾರ ತಿಳಿದು ದೀಪಕ್ ದೊಡ್ಡಯ್ಯ ಅವರು ಹತಾಶೆಯಿಂದ ಶಾಸಕಿ ನಯನಾ ಮೋಟಮ್ಮ ವಿರುದ್ಧ ಹೇಳಿಕೆ ನೀಡಿ ಬಿಜೆಪಿ ನಾಯಕರನ್ನು ಮೆಚ್ಚಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ದೀಪಕ್ ದೊಡ್ಡಯ್ಯ ಅವರು ಆಘಾತಕ್ಕೊಳಗಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿದರೂ ಗೆಲುವು ಸಾಧ್ಯವಿಲ್ಲ ಎಂದು ದೀಪಕ್ ದೊಡ್ಡಯ್ಯ ಸ್ಥಿಮಿತ ಕಳೆದು ಕೊಂಡಿದ್ದಾರೆ. ನಯನಾ ಮೋಟಮ್ಮ ಶಾಸಕರಾದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ 350 ಕೋಟಿ ರೂ. ತಂದಿದ್ದಾರೆ. ಇದರಲ್ಲಿ 80 ಕೋಟಿ ವಿವಿಧ ಕಡೆ ಸೇತುವೆ ನಿರ್ಮಾಣಕ್ಕೆ ಮೀಸಲಿರಿಸಿದ್ದು, ಬಿದರಹಳ್ಳಿ ಗ್ರಾಮದಲ್ಲಿ ಹೊಸದಾಗಿ 22 ಕೋಟಿ ರೂ. ವೆಚ್ಚದ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಪಟ್ಟಣದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಅಮೃತ್ ಕುಡಿಯುವ ನೀರಿನ ಯೋಜನೆಯಲ್ಲಿ 19 ಕೋಟಿ ರೂ. ಮಂಜೂರು ಮಾಡಿದ್ದಾರೆ. ಗ್ರಾಮೀಣ ರಸ್ತೆ, ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ 30 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.ಕಳಸ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಕ್ಷೇತ್ರದ 15 ಕಡೆ ಹೊಸದಾಗಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಹೊಸದಾಗಿ ಶಾಲಾ ಕಟ್ಟಡ ನಿರ್ಮಾಣ ಮತ್ತು ದುರಸ್ತಿ,ಶೌಚಗೃಹ ನಿರ್ಮಾಣಕ್ಕೆ 7ಕೋಟಿ ರೂ. ಅನುದಾನ ನೀಡಿದ್ದಾರೆ. ಕಳಸ, ಹಿರೇಬೈಲ್, ಕೊಟ್ಟಿಗೆಹಾರ ಮಸೀದಿ ನಿರ್ಮಾಣಕ್ಕೆ ತಲಾ 20 ಲಕ್ಷ, ಕಾಂಪೌಂಡ್ ನಿರ್ಮಾಣಕ್ಕೆ 20 ಲಕ್ಷ ನೀಡಿದ್ದಾರೆ. ಕಳಸ ತಾಪಂ ಅಸ್ತಿತ್ವಕ್ಕೆ ತಂದಿದ್ದಾರೆ ಎಂದು ತಿಳಿಸಿದರು.