ಪರಿಸರ ಸೂಕ್ಷತ್ಮ ವಲಯದಿಂದ ಕಡವಂತಿ ಗ್ರಾಪಂ ವ್ಯಾಪ್ತಿಯನ್ನುಹೊರಗಿಡುವಂತೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು.
ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ಕಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯವಾಗಿ (ಇಎಸ್‌ಝಡ್) ಘೋಷಿಸದಂತೆ ಒತ್ತಾಯಿಸಿ ಕಡವಂತಿ ಗ್ರಾಮಸ್ಥರು ಗ್ರಾಪಂ ಪಿಡಿಒ ಮೂಲಕ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಕಡವಂತಿ ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಪೂರ್ವಜರು ಸುಮಾರು 100ಕ್ಕೂ ಅಧಿಕ ವರ್ಷಗಳಿಂದ ನಿರಂತರವಾಗಿ ಕೃಷಿ, ಪಶುಪಾಲನೆ ಮತ್ತು ಸಾಂಪ್ರದಾಯಿಕ ಜೀವನೋಪಾಯ ನಡೆಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಕಡವಂತಿ ಗ್ರಾಪಂ ವ್ಯಾಪ್ತಿಯನ್ನು ಪಶ್ಚಿಮಘಟ್ಟ ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಗ್ರಾಮ ಜನವಸತಿ ಇರುವ ಗ್ರಾಮವಾಗಿದ್ದು, ಭೂ ದಾಖಲೆಗಳು, ಹಳೆ ನಕ್ಷೆಗಳು, ಶಾಲೆ, ದೇವಸ್ಥಾನ, ಸ್ಮಶಾನ, ಭೂಮಿ ಮತ್ತು ಮನೆಗಳು ಇದಕ್ಕೆ ಸಾಕ್ಷಿಯಾಗಿವೆ. 2006ರ ಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕುಗಳ ಕಾಯ್ದೆ ಎ್ಆರ್‌ಎ ಪ್ರಕಾರ ಇಲ್ಲಿ ಬದುಕಲು ಗ್ರಾಮಸ್ಥರಿಗೆ ಹಕ್ಕು ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇಎಸ್‌ಝಡ್ ನಿಯಮಗಳು ಜಾರಿ ಬಂದರೆ ಮನೆ ನಿರ್ಮಾಣ, ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿಗೆ ಅನುಮತಿ ದೊರೆಯುವುದಿಲ್ಲ. ನಮ್ಮ ಮೂಲ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಇಲ್ಲಿನ ಗ್ರಾಮಸ್ಥರು ಪ್ರಮುಖವಾಗಿ ಅಡಿಕೆ, ಕಾಫಿ, ಕಾಳುಮೆಣಸು, ಭತ್ತ, ರಬ್ಬರ್ ಮುಂತಾದ ಕೃಷಿ ಮಾಡುತ್ತಿದ್ದು, ಇಎಸ್‌ಝಡ್‌ನಿಂದ ಹೊಸ ಕೃಷಿ ಚಟುವಟಿಕೆ, ಸಂಸ್ಕರಣಾ ಘಟಕ, ಡೈರಿ, ಾರ್ಮ್‌ಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಇದರಿಂದ ಸಾವಿರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ನಿರಾಶ್ರಿತರಾಗಲಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಡವಂತಿ ಗ್ರಾಮವನ್ನು ಇಎಸ್‌ಝಡ್‌ನಿಂದ ಹೊರಗಿಡಬೇಕು. ಎ್ಆರ್‌ಎ 2006ರ ಅಡಿಯಲ್ಲಿ ಸಾಂಪ್ರದಾಯಿಕ ಅರಣ್ಯ ಹಕ್ಕುಗಳಿಗೆ ರಕ್ಷಣೆ ನೀಡಬೇಕು. 1991ರ ಜನಗಣತಿ ಪ್ರಕಾರ ಇರುವ ಗ್ರಾಮ, ಪಟ್ಟಣ, ಜನವಸತಿ ಪ್ರದೇಶಗಳನ್ನು ಯೋಜನೆಯಿಂದ ಕೈಬಿಡಬೇಕು. ಕೃಷಿ ಚಟುವಟಿಕೆಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕು. ಗ್ರಾಪಂ ಹಾಗೂ ಗ್ರಾಮ ಸಭೆಯ ಒಪ್ಪಿಗೆ ಇಲ್ಲದೇ ಯಾವುದೇ ಗಡಿ ಅಂತಿಮಗೊಳಿಸ ಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.