ಕಡೂರಲ್ಲಿ ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಎಂ.ಎಸ್. ವಿಶಾಲಕ್ಷಮ್ಮ, ಶೋಭಾ ಶ್ರೀನಿವಾಸ್, ರಮ್ಯ, ತಿಮ್ಮಯ್ಯ, ಪುಷ್ಪಾ ಮತ್ತಿತರಿದ್ದರು.
ಕಡೂರು: ಜನಪದ ನಮ್ಮ ನಾಡಿನ ಮೌಲ್ಯಯುತ ಆಸ್ತಿಯಾಗಿದ್ದು, ಅದನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಕ್ಷಮ್ಮ ಹೇಳಿದರು.
ಕನ್ನಡ ಭವನದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದಿಂದ ನಡೆದ ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಮ್ಮ ಮೂಲ ಜನಪದ ಹಾಡುಗಳು ಮಾಯವಾಗುತ್ತಿವೆ. ಇವುಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕಾರ್ಯವಾಗಬೇಕಿದೆ ಎಂದರು.
ಪೂರ್ವಿಕರ ಬಳುವಳಿಯಾಗಿರುವ ನಮ್ಮ ಜಾನಪದ ಸೊಗಡಿನ ಸಂಪ್ರದಾಯವನ್ನು ನಗರ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್‌ನ ಮೂಲಕ ಜಾನಪದ ಉಳಿವಿಗೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.
ತಾಲೂಕು ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್ ಮಾತನಾಡಿ, ಜಾನಪದ ಕಲೆ ಉಳಿಸುವುದು ಕೇವಲ ಸರ್ಕಾರ ಅಥವಾ ಕಲಾವಿದರ ಹೊಣೆಯಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಂಸ್ಕೃತಿ ಅರ್ಥ ಮಾಡಿಕೊಂಡು, ಗೌರವಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಿದಾಗ ಮಾತ್ರ ನಮ್ಮ ಜಾನಪದ ಸೊಗಡಿನ ಭವಿಷ್ಯ ಗಟ್ಟಿಯಾಗುತ್ತದೆ. ಜಾನಪದವು ಮನುಷ್ಯನ ಮನಸ್ಸನ್ನು ವಿಶಾಲಗೊಳಿಸಿ, ಧರ್ಮ-ಜಾತಿಗಳ ಭೇದ ಮರೆಸಿ ಏಕತೆ ಸಾರುತ್ತದೆ. ತಾಲೂಕು ಘಟಕ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿ ಹಿರಿಯ ಕಲಾವಿದರನ್ನು ಗೌರವಿಸುವ ಪ್ರಾಮಾಣಿಕ ಕಾರ್ಯಮಾಡಲಾಗುತ್ತಿದೆ ಎಂದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮ್ಯಾ ಸುರೇಶ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪುಷ್ಪಾ ಅನಂತನಾಯ್ಕ, ತಿಮ್ಮಯ್ಯ, ಸೇರಿದಂತೆ ವೀರಾಂಜನೇಯ ಭಜನಾ ಮಂಡಳಿ ಪದಾಧಿಕಾರಿಗಳು ಇದ್ದರು.