ಎನ್.ಆರ್.ಪುರ ತಾಲ್ಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಪತ್ರಿಕಾ ದಿನಾಚರಣೆ ಎಂಬ ಬರಹದ ಛತ್ರಿಗಳನ್ನು ತೆರೆಯುವ ಮೂಲಕ ಉದ್ಘಾಟಿಸಲಾಯಿತು.
ಎನ್.ಆರ್.ಪುರ: ಪತ್ರಕರ್ತರ ಒಂದು ಬರಹ ದೊಡ್ಡ ಸಂಚಲ ಮೂಡಿಸಬಲ್ಲದು ಎಂದು ಸಂಸದ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದರು.
ಬಾಳೆಹೊನ್ನೂರಿನ ರೋಟರಿ ಭವನದಲ್ಲಿ ನಡೆದ ಎನ್.ಆರ್.ಪುರ ತಾಲೂಕು ಪತ್ರಕರ್ತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಧ್ಯಮ ರಂಗಕ್ಕೆ ಒಂದು ವಿಶಿಷ್ಟ ಶಕ್ತಿ ಇದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮದೇ ಆದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತವೆ. ಅದೇ ರೀತಿಯಾಗಿ ಪತ್ರಿಕಾ ರಂಗ ಪ್ರಜಾಪ್ರಭುತ್ವದ ಮತ್ತೊಂದು ಅಡಿಪಾಯ. ಪ್ರಚಲಿತ ಮಾಧ್ಯಮಗಳನ್ನು ಒಬ್ಬ ಓದುಗಾರನಾಗಿ ಕಂಡಿದ್ದೇನೆ. ರಾಜಕಾರಣಿಗಳು, ಅಧಿಕಾರಿಗಳು ತಪ್ಪು ಮಾಡಿದಾಗ ಮಾಧ್ಯಮಗಳು ಎಚ್ಚರಿಸುತ್ತವೆ. ಪತ್ರಕರ್ತರ ಬರಹಗಳು ಓದುಗರನ್ನು ಗರಬಡಿಯುವಂತಿರಬೇಕು ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪತ್ರಕೋಧ್ಯಮದ ಇತಿಹಾಸ ಬಹಳ ದೊಡ್ಡದು. ಸ್ವಾತಂತ್ರ್ಯ ಹೋರಾಟದಲ್ಲಿ, ಚಳುವಳಿಗಳಲ್ಲಿ ಪತ್ರಿಕೋದ್ಯಮದ ಪಾತ್ರ ಬಹಳ ದೊಡ್ಡದಿದೆ. ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಸರ್ಕಾರದ ಸವಲತ್ತುಗಳು, ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಅದರ ಪಾತ್ರ ಹಿರಿದಾಗಿದೆ ಎಂದು ಹೇಳಿದರು.
ಬಾಳೆಹೊನ್ನೂರು ಪತ್ರಿಕಾ ಭವನಕ್ಕೆ ಬಿ.ಕಣಬೂರು ಗ್ರಾಪಂನಿಂದ ನಿವೇಶನ ನೀಡಲಾಗಿದೆ. ಶೀಘ್ರದಲ್ಲಿಯೇ ಇ-ಸ್ವತ್ತು ನೀಡಲಾಗುವುದು. ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಸುಸಜ್ಜಿತಗೊಳಿಸಲಾಗುವುದು. ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಶೀಘ್ರ ಅನುದಾನ ಬಿಡುಗಡೆಯಾಗಲಿದೆ. ಹಕ್ಕುಪತ್ರ ವಿತರಣೆಗಳಿಗೆ ಅನೇಕ ಕಾನೂನು ತೊಡಕುಗಳಿದ್ದವು, ಅವುಗಳನ್ನು ನಿವಾರಣೆ ಮಾಡಿ, ಕಾನೂನಿನ ಚೌಕಟ್ಟಿನೊಳಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.
ಖಾಸಗಿ ಬಸ್ ಮಾಲೀಕ ಕೆ.ಕೆ.ಬಾಲಕೃಷ್ಣಭಟ್‌ಮಾತನಾಡಿ, ನಾವು ನಮ್ಮ ಬಸ್‌ನಲ್ಲಿ ಪತ್ರಕರ್ತರಿಗೆ ರಿಯಾಯಿತಿ ದರದ ಬಸ್ ವಿತರಿಸಲಾಗಿದೆ. ಸರ್ಕಾರ ಖಾಸಗಿ ಬಸ್ ಮಾಲೀಕರ ಸಮಸ್ಯೆಗಳನ್ನು ಗಮನಿಸಬೇಕು. ಒಂದು ಖಾಸಗಿ ಬಸ್ ಸಂಚರಿಸಿದರೆ ಸರ್ಕಾರಕ್ಕೆ 5 ಸಾವಿರ ರೂ.ಜಮೆಯಾಗಲಿದೆ. ಒಂದು ಬಸ್‌ಗೆ 7 ಜನ ಕಾರ್ಮಿಕರು ಅವಲಂಬಿತರಾಗಿರುತ್ತಾರೆ. ಟೈಯರ್ ಸವಕಳಿ, ರೋಡ್ ಟ್ಯಾಕ್ಸ್ ಇದೇ ರೀತಿ ಸರ್ಕಾರಕ್ಕೆ ಖಾಸಗಿ ಬಸ್‌ನಿಂದ ಹೆಚ್ಚಿನ ಆದಾಯವಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್‌ಕುಮಾರ್ ಮಾತನಾಡಿ, ಈಗಾಗಲೇ ಬಾಳೆಹೊನ್ನೂರು ಪತ್ರಿಕಾ ಭವನಕ್ಕೆ 30*40 ಅಳತೆ ನಿವೇಶನವನ್ನು ಬಿ.ಕಣಬೂರು ಗ್ರಾಪಂನಿಂದ ನೀಡಿದ್ದಾರೆ. ಎನ್.ಆರ್.ಪುರ ಪತ್ರಕರ್ತರಿಗೆ ಈಗಾಗಲೇ ನಿವೇಶನ ಗುತಿಸಲಾಗಿದ್ದು, ಅವರಿಗೆ ಜಾಗದ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಯಡಗೆರೆ ಮಂಜುನಾಥ್ ಹಾಗೂ ಸಿಇಓ ಎನ್.ಎ.ಶೇಖಬ್ಬಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪತ್ರಕರ್ತರಿಗೆ ಶೇ.50 ರಷ್ಟು ರಿಯಾಯಿತಿಯ ಕೆಕೆಬಿ ಬಸ್‌ನ ಪಾಸ್‌ಗಳನ್ನು ವಿತರಿಸಲಾಯಿತು. ಶಿಕ್ಷಕ ಎಚ್.ಎನ್.ವಿಶ್ವನಾಥ್, ಸಂಘದ ಗೌರವಾಧ್ಯಕ್ಷ ಕೆ.ವಿ.ನಾಗರಾಜ್, ಕಾರ್ಯದರ್ಶಿ ನಾಗರಾಜ್‌ಭಟ್ ಇದ್ದರು.