ಶೃಂಗೇರಿ ತಾಲೂಕಿನ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಸದಸ್ಯರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಚಂದ್ರಪ್ಪ, ರಂಗಪ್ಪ, ಚನ್ನಕೇಶವ ಇದ್ದರು.
ಶೃಂಗೇರಿ: ತಾಲೂಕಿನ ಅನೇಕ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸುವ ಕುರಿತು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡು ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತಾಲೂಕು ರೈತ ಸಂಘದ ಸದಸ್ಯರು ಸೋಮವಾರ ತಹಸೀಲ್ದಾರ್ ಅನುಪ್ ಸಂಜೋಗ್‌ಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ತಾಲೂಕಿನ ಅನೇಕ ಕುಟುಂಬಗಳು ಹಲವು ಗ್ರಾಮಗಳಲ್ಲಿ ಕೃಷಿ ಹಾಗೂ ಇತರ ಸಾಂಪ್ರದಾಯಿಕ ಚಟುವಟಿಕೆಗಳನ್ನು ಅನೇಕ ದಶಕಗಳಿಂದ ನಡೆಸಿಕೊಂಡು ಬಂದಿವೆ. ಹಾಗಾಗಿ ಅಂತಹ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರು ಹಾಗೂ ಸ್ಥಳೀಯರ ಬದುಕು ಅತಂತ್ರ ಸ್ಥಿತಿಯಲ್ಲಿದ್ದು ಅವರು ಬೇರೆ ಕಡೆ ಜೀವನ ರೂಪಿಸಿಕೊಳ್ಳಲು ಕಷ್ಟ. ಹಾಗಾಗಿ ತಾಲೂಕಿನ ಯಾವುದೇ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸಬಾರದು ಎಂದರು.
ಸ್ಥಳೀಯರ ಅಭಿಪ್ರಾಯ ಪಡೆಯದೇ ಅವೈಜ್ಞಾನಿಕವಾಗಿ ಸರ್ವೇ ನಡೆಸಿ ಪರಿಸರ ಸೂಕ್ಷ್ಮವಲಯ ಎಂಬ ಘೋಷಣೆಯನ್ನು ಸಂಬಂಧಪಟ್ಟ ಇಲಾಖೆ ಕೈಬಿಡಬೇಕು. ಈ ಕುರಿತು ರೈತರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೆ ಕೆಲವು ಗ್ರಾಮಗಳನ್ನು ಸೇರಿಸಿದ್ದರೆ ಮುಂದಿನ ದಿನಗಳಲ್ಲಿ ಸಂಘ ತೀವ್ರ ಹೋರಾಟ ನಡೆಸಲಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ಬಂಡ್ಲಾಪುರ, ಪದಾಧಿಕಾರಿಗಳಾದ ಚನ್ನಕೇಶವ, ಚಂದ್ರಪ್ಪ, ರಂಗಪ್ಪ ಇದ್ದರು.