ಬಾಳೆಹೊನ್ನೂರಿನ ಇನ್ನರ್‌ವ್ಹೀಲ್ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಕಾಂಚನಾ ಸುಧಾಕರ್ ನಿರ್ಗಮಿತ ಅಧ್ಯಕ್ಷೆ ಸಹನಾ ಯೋಗೀಶ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಬಾಳೆಹೊನ್ನೂರು: ಸಂಘ, ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆ ಮಾಡುವಾಗ ಟೀಕೆ, ಟಿಪ್ಪಣಿಗಳು ಸಹಜವಾಗಿದ್ದು, ಅವುಗಳ ಬಗ್ಗೆ ಚಿಂತಿಸದೆ ಪ್ರಾಮಾಣಿಕವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಇನ್ನರ್‌ವ್ಹೀಲ್ ಜಿಲ್ಲೆ 318ರ ಮಾಜಿ ಜಿಲ್ಲಾ ಚೇರ್ಮನ್ ಕವಿತಾ ನಿಯತ್ ಹೇಳಿದರು.
ಪಟ್ಟಣದ ಇನ್ನರ್‌ವ್ಹೀಲ್ ಕ್ಲಬ್ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕಳೆದ ವರ್ಷ ಬಸ್ ನಿಲ್ದಾಣದ ಮುಂಭಾಗದಲ್ಲಿ ಐ ಲವ್ ಬಾಳೆಹೊನ್ನೂರು ಕಲಾಕೃತಿ ರಚಿಸಿ ಗಮನಾರ್ಹವಾದ ಕೆಲಸ ಮಾಡಿದೆ. ಮಹಿಳೆಯರು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇನ್ನರ್‌ವ್ಹೀಲ್ ಸಂಸ್ಥೆ ಪೂರಕವಾಗಿದ್ದು, ಸದಸ್ಯರಿಗೆ ಉತ್ತಮ ವೇದಿಕೆ ಕಲ್ಪಿಸಿದೆ ಎಂದರು.
ನೂತನ ಅಧ್ಯಕ್ಷೆ ಕಾಂಚನಾ ಸುಧಾಕರ್ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲಾ ಚೇರ್ಮನ್ ಆಶಯದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಂಸ್ಥೆಯ ಸದಸ್ಯರು, ಊರಿನ ನಾಗರಿಕರ ಸಹಕಾರ ದೊರೆತಲ್ಲಿ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಸಂಸ್ಥೆ ಹೆಸರನ್ನು ಚಿರಸ್ಥಾಯಿಯಾಗಿ ಮಾಡಲಾಗುವುದು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ನೂತನ ಕಾರ್ಯದರ್ಶಿ ನಂದಿನಿ ರಾಜೇಶ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ನಿರ್ಗಮಿತ ಅಧ್ಯಕ್ಷೆ ಸಹನಾ ಯೋಗೀಶ್, ನಿರ್ಗಮಿತ ಕಾರ್ಯದರ್ಶಿ ಸುಪ್ರಿಯಾ ಮತ್ತಿತರರು ಹಾಜರಿದ್ದರು.