ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ ಖಂಡಿಸಿ ಕಳಸ ಮೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ನೌಕರರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳಸ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಡೆ ಖಂಡಿಸಿ ಕಳಸ ಮೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ನೌಕರರು ಸೋಮವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಲಾಖೆಯನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸುವುದರಿಂದ ನೌಕರರ ಭವಿಷ್ಯ ಮತ್ತು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಖಾಸಗೀಕರಣದ ನಿರ್ಧಾರ ಕೇವಲ ಸಾರ್ವಜನಿಕರಿಗೆ ಮಾರಕವಲ್ಲ, ಬದಲಿಗೆ ದಶಕಗಳಿಂದ ಇಲಾಖೆ ನಂಬಿಕೊಂಡಿರುವ ನೌಕರರ ಬದುಕನ್ನು ಬೀದಿಗೆ ತಳ್ಳುತ್ತದೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಅಥವಾ ಅರೆ ಸರ್ಕಾರಿ ಸ್ವಾಮ್ಯದಲ್ಲಿದ್ದಾಗ ಸಿಗುವ ಉದ್ಯೋಗ ಭದ್ರತೆ ಖಾಸಗೀಕರಣದಿಂದ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಖಾಸಗಿ ಕಂಪನಿಗಳು ಲಾಭದ ಉದ್ದೇಶದಿಂದ ಯಾವಾಗ ಬೇಕಾದರೂ ನೌಕರರನ್ನು ವಜಾ ಮಾಡುವ ಅಥವಾ ಲೇ ಆ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸದಾಗಿ ಸೇರುವ ನೌಕರರಿಗೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ ಎಂದರು.
ಖಾಸಗಿ ಸಂಸ್ಥೆಗಳು ಕನಿಷ್ಠ ನೌಕರರನ್ನು ಬಳಸಿಕೊಂಡು ಗರಿಷ್ಠ ಕೆಲಸದ ಔಟ್‌ಪುಟ್ ನಿರೀಕ್ಷಿಸುತ್ತವೆ. ಇದರಿಂದ ನೌಕರರ ಮೇಲೆ ಕೆಲಸದ ಒತ್ತಡ ತೀವ್ರ ಹೆಚ್ಚಲಿದ್ದು, ನಿಗದಿತ ಕೆಲಸದ ಅವಧಿ ಮೀರಿ ದುಡಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಖಾಸಗಿ ಕಂಪನಿಗಳು ಕಾಯಂ ನೌಕರರ ಬದಲಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಡಿಮೆ ಸಂಬಳಕ್ಕೆ ಜನರನ್ನು ನೇಮಿಸಿಕೊಳ್ಳಲು ಆದ್ಯತೆ ನೀಡುತ್ತವೆ. ಇದರಿಂದ ಯುವ ಪೀಳಿಗೆಗೆ ಸಿಗಬೇಕಾದ ಕಾಯಂ ಸರ್ಕಾರಿ ಉದ್ಯೋಗದ ಕನಸು ಭಗ್ನಗೊಳ್ಳುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಎಇಇ ರಾಘವೇಂದ್ರ, ಅಧಿಕಾರಿಗಳಾದ ಕಾರ್ತಿಕ್, ಸತೀಶ್, ಮಲ್ಲಿಕಾರ್ಜುನ್ ಇದ್ದರು.