ಕಡೂರು ತಾಲೂಕಿನ ಮದಗದಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು.
ಕಡೂರು: ತಾಲೂಕಿನ ರೈತರ ಬದುಕಿಗೆ ಆಸರೆಯಾಗಿರುವ ಮದಗದಕೆರೆ Madagadakere ಸಮಗ್ರ ಅಭಿವೃದ್ಧಿಗೆ ಒತ್ತುಕೊಟ್ಟು ಕೆರೆಗಳಿಗೆ ನೀರು ತುಂಬಿಸಲು ಶಾಶ್ವತ ನೀರಾವರಿ ಅನುಷ್ಟಾನಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮದಗದಕೆರೆಗೆ ತಾಲೂಕು ಆಡಳಿತ, ಅಡಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ಬಾಗಿನ ಅರ್ಪಿಸಿದ ನಂತರ ಕೆರೆ ಅಭಿವೃದ್ಧಿಗಾಗಿ 50 ಕೋಟಿ ವೆಚ್ಚದ ಕಾವಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮದಗದ ಕೆರೆ ಅಭಿವೃದ್ಧಿಯಾದರೆ ತಾಲೂಕು ವ್ಯಾಪ್ತಿಯ ಒಟ್ಟು 6407.00 ಹೆಕ್ಟೇರ್ ಪ್ರದೇಶದ ಸುಮಾರು ಶೇ.30 ಕೃಷಿ ಭೂ ಭಾಗಕ್ಕೆ ನೀರು ಒದಗಿಸಿದಂತಾಗುತ್ತದೆ. ಇದರಿಂದ ಈ ಪ್ರದೇಶದ ರೈತರಿಗೆ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಹಾಗೂ ರೈತರ ಆರ್ಥಿಕತೆಗೆ ಆದ್ಯತೆ ನೀಡಿದಂತಾಗಲಿದೆ ಎಂದರು.
ಮದಗದ ಕೆರೆಯ ಸಮಗ್ರ ಅಭಿವೃದ್ಧಿಗೆ ಕೆರೆ, ಚಾನೆಲ್, ತಡೆಗೋಡೆ, ಮಡುಬಾವಿಗಳನ್ನು ಸರಿಪಡಿಸಿದಾಗ ಮಾತ್ರ ಅಲ್ಲಿನ ಹಾಯುವಳಿದಾರರಿಗೆ ಸಂಪೂರ್ಣವಾಗಿ ನೀರು ನೀಡಲು ಸಾಧ್ಯ. ಸಣ್ಣ ನೀರಾವರಿ ಇಲಾಖೆ ಮೂಲಕ ಒಟ್ಟು 220 ಕೋಟಿ ರೂ. ಅನುದಾನದ ಡಿಪಿಆರ್ ಸಿದ್ದಪಡಿಸಲಾಗಿದ್ದು, ಏಕಕಾಲದಲ್ಲಿ ಸರ್ಕಾರದಿಂದ ಅನುದಾನ ತರಲು ಸಾಧ್ಯವಾಗದ ಕಾರಣ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಕಡೂರು ತಾಲೂಕು ವ್ಯಾಪ್ತಿಯಲ್ಲಿ 25 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ಪೂರೈಸುವ ಹೊಸ ಮದಗಕೆರೆ ಮತ್ತು ಕಾಲುವೆಗಳ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆವತಿಯಿಂದ ಅನುಷ್ಠ್ಠಾನಗೊಳಿಸಲಾಗುತ್ತಿದೆ. ಕೆರೆ ಅಚ್ಚುಕಟ್ಟಿಗಾಗಿ 7.5 ಕೋಟಿ, 14ಕಿ.ಮೀ ಚಾನೆಲ್ ನಿರ್ಮಾಣ, 22 ಮಡಬಾವಿಗಳನ್ನು ಹೊಸದಾಗಿ ನಿರ್ಮಿಸಲಾಗುತ್ತದೆ. ಮೊದಲ ಹಂತದಲ್ಲಿ ತಡೆಗೋಡೆ ಮತ್ತು ಸೇತುವೆ ಕಾಮಗಾರಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಉಳಿದ ಕಾಮಗಾರಿಗಳು ಹಂತ ಹಂತವಾಗಿ ಮುಕ್ತಾಯವಾಗಿ ಮದಗದ ಕೆರೆಯನ್ನು ಅಣೆಕಟ್ಟಾಗಿ ನಿರ್ಮಿಸಿ ಎರಡು ಸಾವಿರ ಹೆಕ್ಟೆರ್ ಅಧಿಕ ಪ್ರದೇಶಗಳಿಗೆ ಹೆಚ್ಚುವರಿ ನೀರುಣಿಸಲಿದೆ. ತಾಲೂಕಿನ ಕಟ್ಟ ಕಡೆಯ ರೈತನ ಜಮೀನಿಗೂ ಸಹ ಬೆಳೆ ಬೆಳೆಯಲು ನೀರು ಲಭ್ಯವಾಗುತ್ತದೆ ಎಂದರು.