ಎನ್.ಆರ್.ಪುರ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸ್ವ ಉದ್ಯೋಗದ ಸಾಲ ಸೌಲಭ್ಯದ ಮಾಹಿತಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಡಿಸಿ ಕಚೇರಿಯ ಘನತ್ಯಾಜ್ಯ ವಸ್ತು ನಿರ್ವಹಣೆ ವಿಷಯ ತಜ್ಞ ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು.  
ಚಿಕ್ಕಮಗಳೂರು

ಚುನಾಯಿತ ಪ್ರತಿನಿಧಿಗಳು ಸ್ವಚ್ಛತೆಯ ಅರಿವು ಮೂಡಿಸಿ

ಜಿ.ಹೆಚ್. ಧನ್ಯಕುಮಾರ್
ಎನ್.ಆರ್.ಪುರ: ಕಸದ ಮೂಲದಲ್ಲೇ ವಿಂಗಡಿಸಿ ಕೊಡುವ ಬಗ್ಗೆ ಸಾರ್ವಜನಿಕರಿಗೆ ಆಯಾ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಮಾಹಿತಿ ನೀಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಘನತ್ಯಾಜ್ಯ ವಸ್ತು ನಿರ್ವಹಣೆ ವಿಷಯ ತಜ್ಞ ಶಶಿಕುಮಾರ್ ಹೇಳಿದರು.
ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸ್ವ ಉದ್ಯೋಗದ ಸಾಲ ಸೌಲಭ್ಯ ಮಾಹಿತಿ ಕಾರ್ಯಕ್ರಮದಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು ಕುರಿತು ಮಾಹಿತಿ ನೀಡಿದರು.
ವಾಣಿಜ್ಯ ಸಂಕೀರ್ಣಗಳಿಂದ, ಮನೆಗಳಿಂದ ಕಸ ಸಂಗ್ರಹವಾಗುತ್ತಿದ್ದು, ಕಸ ಸಂಗ್ರಹಣೆಯಲ್ಲಿ ಪೌರ ಕಾರ್ಮಿಕರ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‌ಡಬ್ಲುೃಎಂ ನಿಯಮದಂತೆ ಸಾರ್ವಜನಿಕರು ಘನ ತ್ಯಾಜ್ಯವನ್ನು ಹಸಿ, ಒಣ ತ್ಯಾಜ್ಯ, ಸ್ಯಾನಿಟರಿ, ವಿಶೇಷ ತ್ಯಾಜ್ಯ ಎಂದು ವಿಂಗಡಿಸಬೇಕು. ಬಣ್ಣದ ಖಾಲಿ ಡಬ್ಬಗಳು, ಅವಧಿ ಮೀರಿದ ಔಷಧ ಬಾಟಲಿಗಳು, ಮಾತ್ರೆ, ಟಾನಿಕ್ ಬಾಟಲ್‌ಗಳು, ಬಲ್ಬ್‌ಗಳನ್ನು ಮೂಲದಲ್ಲಿಯೇ ವಿಂಗಡಿಸಿ ಕೊಡಬೇಕು. 100 ಕೆಜಿಗಿಂತ ಹೆಚ್ಚಿನ ಕಸ ಉತ್ಪಾದನೆ ಮಾಡುವ ಕಲ್ಯಾಣ ಮಂಟಪದವರು ಮೂಲದಲ್ಲಿಯೇ ಹಸಿಕಸ, ಒಣಕಸ ವಿಂಗಡಿಸಿ ಕೊಡಬೇಕು. ಬಿಡಬ್ಲುೃಜಿ ಪ್ರಮಾಣ ಪತ್ರ ಪಡೆದುಕೊಂಡು ಪಟ್ಟಣ ಪಂಚಾಯಿತಿ ವಾಹನಕ್ಕೂ ಕಸವನ್ನು ನೀಡಬಹುದು ಎಂದು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಅಮರ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ 1 ಲಕ್ಷ ರೂ.ವರೆಗೆ ಸಾಲ ವಿತರಣೆ ಮಾಡಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 50 ಸಾವಿರದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.
ಸ್ವಚ್ಛ ಭಾರತ್ ಮಿಷನ್ ಕಮ್ಯೂನಿಟಿ ಮೊಬೈಲೇಸರ್ ರಕ್ಷಿತಾ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಶಾಲ್‌ಲೊಂಡೆ, ಪ್ರಾದೇಶಿಕ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾನುಮತಿ, ಕಾರ್ಯದರ್ಶಿ ಶಿವರತ್ನಾ, ಸಮುದಾಯ ಸಂಘಟನಾ ಅಧಿಕಾರಿ ಶ್ರುತಿ, ಸ್ನೇಹಾ ಇದ್ದರು.