ಸಂಗಮೇಶ್ವರಪೇಟೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಭದ್ರಾ ವನ್ಯಜೀವಿ ವಿಭಾಗದಿಂದ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ಶಾಸಕ ಟಿ.ಡಿ.ರಾಜೇಗೌಡ ವಿತರಿಸಿದರು. 
ಚಿಕ್ಕಮಗಳೂರು

ಶಿಕ್ಷಣ ದೇಶದ ಅಭಿವೃದ್ಧಿಗೆ ಅಡಿಪಾಯ

ಬಾಳೆಹೊನ್ನೂರು: ಶಿಕ್ಷಣ ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಸಂಗಮೇಶ್ವರಪೇಟೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಭದ್ರಾ ವನ್ಯಜೀವಿ ವಿಭಾಗದಿಂದ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಶಿಕ್ಷಣವಿಲ್ಲದ ಬದುಕು ನಿರರ್ಥಕವಾಗಿದ್ದು, ಶಿಕ್ಷಣವೇ ವಿದ್ಯಾರ್ಥಿಗಳ ಜೀವನದ ಪ್ರಮುಖ ಅಂಗ ಎಂಬುದನ್ನು ಅರಿಯಬೇಕಿದೆ. ಇಂದು ವಿಶ್ವದಾದ್ಯಂತ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳು ಅವುಗಳಿಗೆ ಅನುಗುಣವಾಗಿ ಕಲಿತು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಸರ್ಕಾರವು ಸಹ ಕಾರ್ಯೋನ್ಮುಖವಾಗಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ಇಂದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕಿದೆ.
ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಆಂಗ್ಲ ಮಾಧ್ಯಮ ಶಿಕ್ಷಣ ಸೇರಿದಂತೆ ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು ಮುಂತಾದವನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಭದ್ರಾ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಗೌರವ್, ಸಿಬ್ಬಂದಿ ಆರಿಫ್, ಶಾಲೆಯ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಜರಿದ್ದರು.