ಬಾಳೆಹೊನ್ನೂರು: ದೇಶದ ಭವ್ಯ ಭವಿಷ್ಯಕ್ಕೆ ಶಿಕ್ಷಣವೇ ಅಡಿಪಾಯವಾಗಿದ್ದು, ಎಲ್ಲ ಗ್ಯಾರಂಟಿಗಳಿಗಿಂತ ಶಿಕ್ಷಣ ಬಹುದೊಡ್ಡ ಗ್ಯಾರಂಟಿ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಮೇಲ್ಪಾಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ಕೇಶ್ವರ ಗ್ರಾಪಂನ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಮತ್ತು ನೂತನ ಪ್ರೌಢಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದ್ದು, 50 ಸಾವಿರ ಕೋಟಿ ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದೆ. ಇದರಿಂದ ಭಾರತದಲ್ಲಿಯೇ ರಾಜ್ಯದಲ್ಲಿ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ರಾಜ್ಯ ನಮ್ಮದಾಗಿದೆ. 46 ಸಾವಿರ ಸರ್ಕಾರಿ ಶಾಲೆಗಳು, ಸೇರಿದಂತೆ ಅನುದಾನಿತ ಶಾಲೆಗಳು ಸೇರಿ ಒಟ್ಟು 57 ಸಾವಿರ ಶಿಕ್ಷಣ ಸಂಸ್ಥೆಗಳಿವೆ. ರಾಜ್ಯ ಸರ್ಕಾರದ ಶೇ.40ರಷ್ಟು ನೌಕರರು ಶಿಕ್ಷಣ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಜತೆಗೆ ಪ್ರಸಕ್ತ ವರ್ಷದಿಂದ 1ರಿಂದ 12ನೇ ತರಗತಿಯವರೆಗೆ ಉಚಿತವಾಗಿ ನೋಟ್‌ಪುಸ್ತಕ ಹಾಗೂ ಪಠ್ಯಪುಸ್ತಕ ನೀಡುವ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳೊಂದಿಗೆ ಶಿಕ್ಷಣದ ಗ್ಯಾರಂಟಿ ನೀಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಇನ್ನೊಂದು ವಾರದಲ್ಲಿ 12 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕರ್ಕೇಶ್ವರ ಗ್ರಾಪಂನ ನೂತನ ಕಟ್ಟಡವನ್ನು 42 ಲಕ್ಷ ರೂ. ವೆಚ್ಚದಲ್ಲಿ, ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಕಟ್ಟಡವನ್ನು 82 ಲಕ್ಷ ರೂ. ವೆಚ್ಚದಲ್ಲಿ ವಿವೇಕ ಯೋಜನೆಯಡಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕ್ಷೇತ್ರಕ್ಕೆ 3 ಕೆಪಿಎಸ್ ಮಂಜೂರಾಗಿವೆ. ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅದರ ಮೂಲಕ ಶಾಲೆಗಳ ಅಭಿವೃದ್ಧಿಗೆ ಸಚಿವರು ಯೋಜನೆ ರೂಪಿಸಿದ್ದು, ಇದು ಯಶಸ್ವಿಯಾಗುವ ಭರವಸೆ ಇದೆ ಎಂದರು.