ಬೀರೂರಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ಕಾರ್ಯಾಗಾರವನ್ನು ಇನ್‌ಸೈಟ್ ಸಂಸ್ಥೆ ಸಂಸ್ಥಾಪಕ ವಿನಯ್‌ಕುಮಾರ್ ಉದ್ಘಾಟಿಸಿದರು. ದೊರೇಶ್, ಎಂ.ಎಚ್.ತಿಮ್ಮಯ್ಯ, ದೇವರಾಜ್ ಇತರರಿದ್ದರು.
ಬೀರೂರು:ಸರ್ಕಾರ ಊಟ, ವಸತಿ, ಸಮವಸ್ತ್ರ, ಪುಸ್ತಕ, ವಿದ್ಯಾರ್ಥಿವೇತನದಂತಹ ಎಲ್ಲ ಶೈಕ್ಷಣಿಕ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಭಾವಂತರಾಗಿ. ಪ್ರತಿಯೊಬ್ಬರೂ ಬಡತನದಿಂದ ಹೊರಬರಬೇಕಾದರೆ ಜ್ಞಾನ ಒಂದೇ ಮಾರ್ಗ ಎಂದು ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್ ತಿಳಿಸಿದರು.
ಗುರುಭವನದಲ್ಲಿ ಭಾನುವಾರ ತಾಲೂಕು ಆಡಳಿತ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇನ್‌ಸೈಟ್ಸ್, ಐಎಎಸ್-ಕೆಎಎಸ್ ಬೆಂಗಳೂರು, ದೆಹಲಿ ಕೋಚಿಂಗ್‌ನಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ನೀಡುವ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಾರೆ. ಹುದ್ದೆಗಳ ಅವಕಾಶ ಇದ್ದರೂ ಇಲ್ಲದಿದ್ದರೂ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಜಾಣ್ಮೆ ಅವರಲ್ಲಿರುತ್ತದೆ. ಅಂತಹ ವಿದ್ಯಾರ್ಥಿಗಳು ಸಾಧನೆಯ ಗುರಿಯತ್ತ ಸಾಗುತ್ತಾರೆ. ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ನಿಮ್ಮ ಮಹತ್ವಾಕಾಂಕ್ಷೆ ಓದುವ ಕಡೆಗೆ ಇರಬೇಕು. ಆಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್‌ಗಳನ್ನು ಸುಲಭವಾಗಿ ಎದುರಿಸಬಹುದು. ಯಶಸ್ಸು ಎನ್ನುವುದು ನಿರಂತರ ಪರಿಶ್ರಮದಿಂದ ಬರುತ್ತದೆ. ಸಮಯ ಅತ್ಯಂತ ಅಮೂಲ್ಯ ಸಂಪತ್ತು ಎಂದರು.
ಕಡೂರು ಸಿಪಿಐ ರಫೀಕ್ ಮಾತನಾಡಿ, ದೇಶ ನಮಗೇನು ಮಾಡಿದೆ ಅನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ನೀಡಿದ್ದೇವೆ ಎಂಬುದು ಮುಖ್ಯ. ತಂದೆ-ತಾಯಿ ನಿಮಗೆ ಕಷ್ಟದ ಅರಿವಾಗದಂತೆ ಓದಿಸಲು ಪ್ರಯತ್ನಿಸುತ್ತಾರೆ. ಅವರ ಕನಸನ್ನು ನನಸು ಮಾಡುವ ಧ್ಯೇಯ ನಿಮ್ಮದಾಗಿರಬೇಕು. ಪದವಿ ಪಡೆದು ಹೊರಬರುವ ಲಕ್ಷಾಂತರ ವಿದ್ಯಾರ್ಥಿಗಳು ಹುದ್ದೆಗಳ ಅಭಿಲಾಷೆ ಹೊಂದುವುದು ಸಹಜ. ಆದರೆ ಕೆಲವೇ ಹುದ್ದೆಗಳಿಗೆ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಹುದ್ದೆಗಳು ಲಭಿಸುವುದು ಕೆಲವೇ ಪ್ರತಿಭಾವಂತರಿಗೆ ಮಾತ್ರ ಎಂದರು.
ಬಾಣಾವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ದೊರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೇವರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ನ ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು ಇದ್ದರು.