ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್‌ನಲ್ಲಿ ಈಸ್ಟರ್ ಹಬ್ಬವನ್ನು ಧರ್ಮಗುರುಗಳ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳೊಂದಿಗೆ ಆಚರಿಸಲಾಯಿತು.
ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚ್‌ನಲ್ಲಿ ಭಾನುವಾರ ಈಸ್ಟರ್ ಹಬ್ಬವನ್ನು (ಯೇಸುಕ್ರಿಸ್ತರ ಪುನರುತ್ಥಾನ) ಕ್ರೈಸ್ತರು ಸಡಗರದಿಂದ ಆಚರಿಸಿದರು. ಧರ್ಮಗುರು ರಿಚರ್ಡ್ ಪಾಯ್ಸ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಧರ್ಮಗುರುಗಳಾದ ಸ್ಟ್ಯಾನಿ, ಪೌಲ್ ಡಿಸೋಜಾ ಬಲಿಪೂಜೆಯ ವಿಧಿ ವಿಧಾನಗಳಿಗೆ ಸಹಕಾರ ನೀಡಿದರು.
ಈಸ್ಟರ್ ಪೂರ್ವಭಾವಿಯಾಗಿ ಗುರುವಾರ ಯೇಸುಕ್ರಿಸ್ತರ ಅಂತಿಮ ಭೋಜನ, 12 ಶಿಷ್ಯಂದಿರ ಪಾದ ತೊಳೆದು ಕಾಣಿಕೆ ಅರ್ಪಿಸುವುದು, ಶುಕ್ರವಾರ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವನ್ನು ಆಚರಿಸಲಾಯಿತು.
ಈಸ್ಟರ್ ಅಂಗವಾಗಿ ಭಾನುವಾರ ಈಸ್ಟರ್ ಮೊಟ್ಟೆಗಳನ್ನು ಭಕ್ತರಿಗೆ ವಿತರಿಸಲಾಯಿತು. ಪುನರುತ್ಥಾನದ ಸಂಕೇತವಾಗಿ ಭಕ್ತರಿಗೆ ಧರ್ಮಗುರುಗಳು ಮೊಟ್ಟೆಗಳನ್ನು ವಿತರಿಸಿ ಮೊಟ್ಟೆಯಿಂದ ಒಂದು ಜೀವ ಹೇಗೆ ಹೊರಬರುತ್ತದೆ ಎಂಬುದನ್ನು ತಿಳಿಸಿಕೊಟ್ಟರು. ಭಕ್ತರಿಗೆ ಪವಿತ್ರ ತೀರ್ಥವನ್ನು ಸಿಂಪಡಿಸಿ ಆಶೀರ್ವದಿಸಲಾಯಿತು. ಯೇಸು ಕ್ರಿಸ್ತರು ಪುನರುತ್ಥಾನಗೊಂಡ ಬಗೆಯನ್ನು ಪ್ರಾತ್ಯಕ್ಷಿಕೆ ಮೂಲಕ ಅಲೆಕ್ಸ್ ಪ್ರದರ್ಶಿಸಿದರು.