ಪ್ರಮುಖ ಮುಖ್ಯಾಂಶಗಳು
ಚಿಕ್ಕಮಗಳೂರು:
ಮಳೆಯೇ ಇಲ್ಲದ ಒಣಗಿದ ಭೂಮಿ, ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆಯೇ ಒಡೆಯದೆ ಮಣ್ಣಿನಲ್ಲಿ ಬಿಸಿಲಿನ ಬೇಗೆಗೆ ಸುಟ್ಟು ಕರಕಲಾಗಿರುವುದು, ಮುಂದಾದರೂ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಜಮೀನು ಹದ ಮಾಡಿಕೊಂಡಿರುವ ರೈತರು. ಇದೆಲ್ಲವೂ ಕಾಣಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲ ಭಾಗದಲ್ಲಿ ನಡೆಸಿದ ಬರ ಪರೀಶೀಲನೆ ಸಂದರ್ಭದಲ್ಲಿ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ ಬಯಲು ಸೀಮೆ ಪ್ರದೇಶಗಳಾದ ಈ ನಾಲ್ಕು ತಾಲೂಕುಗಳಲ್ಲಿ ಮಳೆಯೇ ಇಲ್ಲದೆ ಜನ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲು ತರಿಕೆರೆ ತಾಲೂಕಿಗೆ ಭೇಟಿ ನೀಡಿದ ಇಂಧನ ಸಚಿವರು ಅಲ್ಲಿನ ಬೆಳೆಗಳ ಸ್ಥಿತಿಗತಿ ಪರಿಶೀಲನೆ ನಡೆಸಿದರು. ಬಳಿಕ ಅಜ್ಜಂಪುರ ತಾಲೂಕಿನ ಬೇಗೂರು, ಮುದಿಗೆರೆ, ಕಲ್ಕೆರೆ ಭಾಗದಲ್ಲಿ ಬರಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಈರುಳ್ಳಿ ನಾಟಿ ಮಾಡಿದ ರೈತರು ಸಂಪೂರ್ಣವಾಗಿ ಬೆಲೆ ಕಳೆದುಕೊಂಡ ದೃಶ್ಯಗಳು ಕಂಡು ಬಂದವು. ಕೆರೆಗಳಲ್ಲಿ ಒಂದು ಹನಿ ನೀರು ಸಂಗ್ರಹವಾಗದಿರುವುದನ್ನು ಸಚಿವರು ಗಮನಿಸಿದರು.
ಬಳಿಕ ಕಡೂರು ತಾಲೂಕಿನ ಚಿಕ್ಕಬಳ್ಳೇಕೆರೆ ಕಾವಲು, ದೊಣ್ಣೆ ಕೋರನಹಳ್ಳಿ, ಅಣ್ಣೆಗೆರೆ ಭಾಗದಲ್ಲಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ರೈತರು ಕನಿಷ್ಟ ಬಿತ್ತನೆ ಮಾಡಲು ಆಗದಷ್ಟು ಕನಿಷ್ಟ ಮಳೆಯಾಗದಿರುವುದು ಕಂಡು ಬಂದಿತು. ಈ ವೇಳೆ ರೈತರಿಗೆ ಧೈರ್ಯ ತುಂಬಿದ ಜಾರ್ಜ್ ಅವರು ಮುಂದಿನ ದಿನಗಳಲ್ಲಿ ನಿರೀಕ್ಷೆಯಂತೆ ಮಳೆಯಾದಲ್ಲಿ ಬೆಳೆ ಬೆಳೆಯಿರಿ. ಇಲ್ಲದಿದ್ದಲ್ಲಿ ಕಡಿಮೆ ನೀರಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಅಧಿಕಾರಿಗಳ ಬಳಿ ಮಳೆ ಹಾಗೂ ಬೆಳೆಯ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು, ತರಿಕೆರೆ ಕೆಲಭಾಗ ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ವಾಡಿಕೆಗಿಂತ ಶೇಕಡ 70ಕ್ಕೂ ಕಡಿಮೆ ಮಳೆಯಾಗಿದೆ. ರೈತರಿಗೆ ಇದುವರೆಗೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದಿದ್ದೇ ಆದಲ್ಲಿ ಈರುಳ್ಳಿ, ಆಲೂಗಡ್ಡೆ, ಹಸಿ ಮೆಣಸಿನ ಬೆಳೆಗಳ ಬದಲು ರಾಗಿ ಬೆಳೆಯುವಂತೆ ರೈತರಿಗೆ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್ ಪಿ ಜಿತೇಂದ್ರ ಕುಮಾರ್ ದಯಾಮ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳಾ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.