ಪೈಪ್ ಅಳವಡಿಕೆಗಾಗಿ ಕಾಂಕ್ರೀಟ್ ರಸ್ತೆಯನ್ನು ಅಗೆದು ಬಿಟ್ಟಿರುವುದು.  
ಚಿಕ್ಕಮಗಳೂರು

ಕುಡಿಯುವ ನೀರಿನ ಕಾಮಗಾರಿ ಕಳಪೆ

ಜಿ. ಗಜೇಂದ್ರ
ಮೂಡಿಗೆರೆ: ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಎರಡು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ. 
18 ಕೋಟಿ ರೂ. ಅನುದಾನದಲ್ಲಿ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಪಟ್ಟಣದ ಎಲ್ಲ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಪೈಪ್ ಅಳವಡಿಸಲಾಗಿದೆ. ಒಂದೊಂದು ವಸತಿ ಸಮುಚ್ಛಯದ ಕಟ್ಟಡದಲ್ಲಿ ಏಳೆಂಟು ಮನೆಗಳಿದ್ದರೂ ಒಂದು ನಲ್ಲಿಯನ್ನು ಮಾತ್ರ ಅಳವಡಿಸಲಾಗಿದೆ. 
ಅಳವಡಿಸಿರುವ ಪೈಪ್ ಮತ್ತು ನಲ್ಲಿಗಳೆಲ್ಲವೂ ಕಳಪೆಯದ್ದಾಗಿದೆ. ನೀರನ್ನು ಅಳತೆ ಮಾಡುವ ಕಳಪೆ ದರ್ಜೆಯ ಮೀಟರ್ ಕೂಡ ನಲ್ಲಿಯೊಂದಿಗೆ ಅಳವಡಿಸಲಾಗಿದೆ. ಮಾರ್ಕೆಟ್ ರಸ್ತೆಯ ಆದಿಶಕ್ತಿ ದೇವಸ್ಥಾನದ ಗೋಡೆಗೆ 4 ನಲ್ಲಿಗಳನ್ನು ಮೀಟರ್ ಸಹಿತ ಒಟ್ಟಿಗೆ ಗುಂಪಾಗಿ ಅಳವಡಿಸಲಾಗಿದೆ. ಅಲ್ಲಿ ಕೊಡ ಹಿಡಿದು ನೀರು ತುಂಬಿಸಿಕೊಳ್ಳುವುದು ಹೇಗೆಂದು ತಿಳಿಯುತ್ತಿಲ್ಲ. ಪಟ್ಟಣದ ಬಹುತೇಕ ಮನೆಗಳಿಗೆ ಅಳವಡಿಸಿರುವ ನಲ್ಲಿಯನ್ನು ಮನೆಗಳಿಂದ ಕೊಳಚೆ ನೀರು ಹರಿಯುವ ಚರಂಡಿಗೆ ಅಳವಡಿಸಲಾಗಿದೆ. ಕೆಲವೆಡೆ ಮನೆಯ ಗೋಡೆ ಮತ್ತು ಕಾಂಪೌಂಡ್‌ಗೆ ನಲ್ಲಿಯನ್ನು ಬೇಕಾಬಿಟ್ಟಿಯಾಗಿ ಅಳವಡಿಸಲಾಗಿದೆ. ನಲ್ಲಿಯಿಂದ ನೀರು ಹಿಡಿಯುವ ವಿಧಾನ ಹೇಗೆ ಎಂದು ತಿಳಿಯದೆ ಜನ ಕಂಗಾಲಾಗಿದ್ದಾರೆ. ಈಗ ಪೈಪ್ ಮತ್ತು ನಲ್ಲಿ ಅಳವಡಿಕೆ ಕಾರ್ಯ ಎರಡು ತಿಂಗಳಿನಿಂದ ಸ್ಥಗಿತಗೊಂಡಿದೆ.