ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಬುಕ್ಕಾಂಬು ತಪೋಬೆಟ್ಟದಲ್ಲಿ ವಿಶೇಷವಾಗಿ ಜಪ ತಪೋನುಷ್ಠಾನ ನೆರವೇರಿಸಿದ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವದಿಸಿದರು.
ಬಾಳೆಹೊನ್ನೂರು: ಶಿವ ಜ್ಞಾನದ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ಶ್ರೀಗುರು. ಬಾಳಿನ ಬನ ಚಿಗುರಲು ಗುರು ಕಾರುಣ್ಯ ಕಿರಣ ಮುಖ್ಯ. ಭಕ್ತನ ಹೃದಯ ಭಗವಂತ ನೆಲೆಸಿರುವ ಗುಡಿಯಾಗಿದೆ ಎಂದು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕನಸು ಸಾಕಾರಗೊಳ್ಳಲು ಮಾರ್ಗ ಬದಲಿಸಬೇಕಲ್ಲದೇ ನಂಬಿದ ತತ್ವಗಳನ್ನಲ್ಲ. ಗಿಡಗಳು ಚಿಗುರು ಪಡೆಯಲು ಎಲೆ ಉದುರಿಸುತ್ತವೇ ಹೊರತು ಬೇರುಗಳನ್ನಲ್ಲ. ಸುಳ್ಳಿನ ಪರ ಜನ ಇದ್ದರೆ ಸತ್ಯದ ಪರ ದೇವರು ಯಾವಾಗಲೂ ಇರುತ್ತಾನೆ. ಸಾವು ಪಡೆಯಲು ಸಾವಿರ ದಾರಿ. ಆದರೆ ಬದುಕು ಪಡೆಯಲು ಇರುವುದೊಂದೇ ದಾರಿ. ಅದುವೇ ಆತ್ಮ ವಿಶ್ವಾಸ ಎಂದರು.
ಅಧಿಕ ಜೇಷ್ಠ ಮಾಸದ ಅಂಗವಾಗಿ ಬುಕ್ಕಾಂಬುದಿ ತಪೋ ಬೆಟ್ಟದಲ್ಲಿ ವಿಶೇಷವಾಗಿ ಜಪ ತಪೋನುಷ್ಠಾನ ನೆರವೇರಿಸಿದ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಹುಬ್ಬಳ್ಳಿಯ ವೀರೇಶ ಪಾಟೀಲ, ಹರಿಹರದ ಕೊಂಡಜ್ಜಿ ಪಂಚಾಕ್ಷರಿ, ಪ್ರೊ.ವಜ್ರೇಶ ನಾಗರಾಜ, ಸುರೇಶ, ತರ್ಲಘಟ್ಟದ ವೀರೇಶ ಹಿರೇಮಠ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತರ್ಲಘಟ್ಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಅಧಿಕ ಜೇಷ್ಠ ಮಾಸದ ಪೌರ್ಣಿಮೆ ಅಂಗವಾಗಿ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.