ಶೃಂಗೇರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರಕಾಶ್ ಹಾಗೂ ಗೋಪಾಲ್ ಅವರನ್ನು ಗೌರವಿಸಲಾಯಿತು. 
ಚಿಕ್ಕಮಗಳೂರು

ದಲಿತರ ಶ್ರೇಯಸ್ಸಿಗಾಗಿ ಶ್ರಮಿಸಿದ ನಾಯಕ ಡಾ.ಬಿ.ಆರ್.ಅಂಬೇಡ್ಕರ್

ಶೃಂಗೇರಿ: ಭಾರತದ ಸಂವಿಧಾನ ರಚನಾ ಸಭೆ ಕರಡು ಸಮಿತಿ ಅಧ್ಯಕ್ಷರಾಗಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಭಾರತ ದೇಶ ಕಂಡ ಅಪರೂಪದ ಕಾನೂನು ತಜ್ಞ ಮತ್ತು ಮಹಾನ್ ಸಮಾಜ ಸುಧಾರಕರು ಎಂದು ಉಪನ್ಯಾಸಕ ಎಚ್.ಎ.ಪ್ರಕಾಶ್ ತಿಳಿಸಿದರು.
ಕನ್ನಡ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕೀಯ ಚಿಂತನೆ, ಶೋಷಿತರ ಹಾಗೂ ಬಡವರ, ಏಳಿಗೆಗಾಗಿ ಕಾಳಜಿವಹಿಸಿದ್ದ ಅವರು ನುಡಿದಂತೆ ನಡೆದ ಮಹಾನ್ ನಾಯಕರು. ಸಮಾಜದ ಕಟ್ಟಕಡೆಯ ಜನರು ಘನತೆಯಿಂದ ಬದುಕಬೇಕು. ಅವರಿಗೂ ಸರ್ವಹಕ್ಕು ಇದೆ ಎಂಬ ವಿಚಾರಧಾರೆಯನ್ನು ಸಮಾಜಕ್ಕೆ ನೀಡಿ ದಲಿತರ ಶ್ರೇಯಸ್ಸಿಗಾಗಿ ಪ್ರಾಮಾಣಿಕವಾಗಿ ದುಡಿದ ಬಾಬಾ ಸಾಹೇಬ್ ಅವರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಉತ್ಕಟ ಮಾನವತೆಯ ಸಂಕೇತವಾಗಿ ಸಂಘಟನೆ ನೇತೃತ್ವವಾಗಿ ಶಿಕ್ಷಣದ ಪ್ರತೀಕವಾಗಿ, ಶೋಷಿತ ವರ್ಗದ ಧ್ವನಿಯಾಗಿ ದೇಶದ ಸಮಾನತೆ ಕನಸು ಕಂಡ ಬಾಬಾ ಸಾಹೇಬ್ ದೇಶಕ್ಕೆ ನೀಡಿದ ಅಮೂಲ್ಯ ವಿವಾರಧಾರೆಗಳನ್ನು ಆಚರಣೆಗೆ ತರುವ ಅಗತ್ಯವಿದೆ ಎಂದರು.
ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ಎಂ.ಗೋಪಾಲ್ ಮಾತನಾಡಿ, ಬಾಬುಜಗಜೀವನ್ ರಾಮ್ ಕೇಂದ್ರ ಕೃಷಿ ಸಚಿವರಾದ ಕಾಲಘಟ್ಟದಲ್ಲಿ ಭಾರತದಲ್ಲಿ ಹಸಿರು ಕ್ರಾಂತಿ ಮತ್ತು ಭಾರತೀಯ ಕೃಷಿಯನ್ನು ಅಧುನೀಕರಿಸಲು ಅವರು ನೀಡಿದ ಕೊಡುಗೆ ಮಹತ್ವವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ 30 ವರ್ಷ ದೇಶದ ಉನ್ನತಿಗಾಗಿ ಪರಿಶ್ರಮಿಸಿದರು. ದಲಿತರಿಗೆ ಸಮಾನತೆ ಹಕ್ಕನ್ನು ನೀಡಿದ ಬಾಬೂಜಿ ಅವರ ಕಾರ್ಯನಿರ್ವಹಣೆ ಇಂದಿನ ರಾಜಕಾರಣಿಗಳಿಗೆ ಆದರ್ಶನೀಯವಾಗಿದೆ ಎಂದ ಹೇಳಿದರು.
ತಹಸೀಲ್ದಾರ್ ಅನುಪ್ ಸಂಜೋಗ್, ಇಒ ಸುದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ವರಲಕ್ಷೀತ್ಮ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಕಂದಾಯ ಇಲಾಖೆ ಅಧಿಕಾರಿ ಪ್ರವೀಣ್ ಕುಮಾರ್ ಇದ್ದರು.