ಮೂಡಿಗೆರೆ ತಾಲೂಕು ಕಸಾಪದಿಂದ ಆಯೋಜಿಸಿದ್ದ ಭಕ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಳೆಕೋಟೆ ರಮೇಶ್ ಉದ್ಘಾಟಿಸಿದರು.
ಮೂಡಿಗೆರೆ: ಮಕ್ಕಳು ಅಂಕಗಳಿಕಗಾಗಿ ಶಿಕ್ಷಣ ಪಡೆಯುವಂತಾಗಬಾರದು. ಕನ್ನಡ ಮಾಧ್ಯಮದಲ್ಲಿ ಗುಣಾತ್ಮಕವಾದ ಶಿಕ್ಷಣವಿದೆ ಎಂಬುದನ್ನು ಪಾಲಕರು ಅರ್ಥ ಮಾಡಿಕೊಂಡು ಮಾತೃ ಭಾಷೆ ಕಲಿಕೆಗೆ ಆದ್ಯತೆ ನೀಡಿದರೆ ಮಕ್ಕಳು ಉತ್ತಮ ಅಂಕ ಗಳಿಸುವ ಜತೆಗೆ ಕನ್ನಡಕ್ಕೆ ಮೌಲ್ಯಯುತವಾದ ಗೌರವ ತಂದುಕೊಡಲಿದ್ದಾರೆ ಎಂದು ಹಿರಿಯ ಸಾಹಿತಿ ಹಳೆಕೋಟೆ ರಮೇಶ್ ಹೇಳಿದರು.
ಪಂಡಿತ್ ದೀನದಯಾಳ್‌ಉಪಾಧ್ಯಾಯ ಸಭಾ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸೋಮವಾರ ಆಯೋಜಿಸಿದ್ದ ವಿಧಾನಸಭೆ ಮಾಜಿ ಅಧ್ಯಕ್ಷ ಡಿ.ಬಿ.ಚಂದ್ರೇಗೌಡ ಹಾಗೂ ಹಳಸೆ ಭೈರೇಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಿಕ್ಷಣ ಪಡೆಯುವುದು ಜ್ಞಾನ ವೃದ್ಧಿಗಾಗಿ ಹೆಚ್ಚಿನ ಜ್ಞಾನ ಸಂಪಾದನೆಗೆ ಅಗತ್ಯ ಭಾಷಾ ಮಾಧ್ಯಮ ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ನೀಡಲಾಗಿದೆ. ಶಿಕ್ಷಣಕ್ಕೆ ಯಾವುದೇ ಮಾಧ್ಯಮವನ್ನು ಆಯ್ದುಕೊಂಡರೂ ತಮ್ಮ ಮಾತೃಭಾಷೆ ಮರೆಯಬಾರದು ಮಾತೃಭಾಷೆ ಮಾತನಾಡಲು ಹಿಜರಿಕೆ ಇರಬಾರದು ಎಂದರು.
ಹಿಂದೆ ಗ್ರಾಮೀಣ ಭಾಗದಲ್ಲಿ ಶಾಲೆಗಳ ಕೊರತೆಯಿತ್ತು. ನಾಲ್ಕಾರು ಕಿ.ಮೀ ದೂರ ನಡೆದು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ಪಡೆಯುತ್ತಿದ್ದರು. ಹಿಂದಿನ ಕಾಲದ ಗುಣಮಟ್ಟದ ಶಿಕ್ಷಣ ಈಗ ಸಿಗುತ್ತಿಲ್ಲ. ಈಗ ಆಧುನಿಕ ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇತರೆ ಭಾಷೆಯನ್ನು ಆಯ್ಕೆ ಮಾಡಿಕೊಂಡರೂ ತಪ್ಪಲ್ಲ. ಆದರೆ ಕನ್ನಡಕ್ಕೆ ಕುಂದುಂಟಾಗುವ ರೀತಿಯಲ್ಲಿ ವರ್ತಿಸಬಾರದು. ಮಾತೃ ಭಾಷೆಯನ್ನು ಗೌರವಿಸಬೇಕು ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ, ತಾಲೂಕು ಕಸಾಪ ಘಟಕದಿಂದ ಕನ್ನಡ ಭವನ ನಿರ್ಮಿಸುವ ಗುರಿಯಿದೆ. ಅದಕ್ಕಾಗಿ ಸರ್ಕಾರದಿಂದ ನಿವೇಶನ ಮಂಜೂರಾತಿಗೆ ಮನವಿ ಮಾಡಲಾಗುವುದು. ಕನ್ನಡ ಭವನದಲ್ಲಿ ಸಾಹಿತ್ಯ ಕುರಿತಾದ ಚಟುವಟಿಕೆಗಳನ್ನು ನಡೆಸಲು ಮತ್ತು ದತ್ತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಲು ದಾನಿಗಳು ಸಹಕಾರ ನೀಡಬೇಕು. ಹಾಗಾದರೆ ಮಾತ್ರ ಕನ್ನಡ ಸಾಹಿತ್ಯ ಮತ್ತು ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ತಿಳಿಸಿದರು.