ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಿರುವ ಹಿನ್ನೆಲೆಯಲ್ಲಿ ಎನ್.ಆರ್.ಪುರದ ಅಂಬೇಡ್ಕರ್ ವೃತ್ತದಲ್ಲಿ ಯೂತ್ ಕಾಂಗ್ರೆಸ್ ಘಟಕದಿಂದ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೌಶಿಕ್, ರತನ್ ಗೌಡ, ಅಕ್ಷಿರಾ ಇತರರಿದ್ದರು.
ಎನ್.ಆರ್.ಪುರ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಪಕ್ಷದಲ್ಲಿ ತಳಮಟ್ಟದಿಂದ ಹಂತ ಹಂತವಾಗಿ ಬೆಳೆದುಬಂದು ನಾಯಕ. ಅವರು ಸಿಎಂ ಆಗುತ್ತಿರುವುದು ಎಲ್ಲರಿಗೂ ಸಂಭ್ರಮ ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಯುವ ಕಾಂಗ್ರೆಸ್ ಶನಿವಾರ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ಮೂಲಕ ಬೆಳೆದು ಬಂದು ಈಗ ಮುಖ್ಯಮಂತ್ರಿಯಾಗುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತನಿಗೆ ಸೂಕ್ತ ಸ್ಥಾನಮಾನ ದೊರೆತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತವರು ಡಿ.ಕೆ.ಶಿವಕುಮಾರ್. ರಾಜ್ಯದಲ್ಲಿ ಪಕ್ಷವನ್ನು ಪ್ರಬಲವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಪಪಂ ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಇನ್ನು ಮುಂದೆ ರಾಜ್ಯದಲ್ಲಿ ಹೊಸ ಪರ್ವ ಪ್ರಾರಂಭವಾಗಲಿದೆ ಎಂದರು. ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಜಿತ್ ದಂಡಿನಮಕ್ಕಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅತ್ಯಂತ ತಳಮಟ್ಟದಿಂದ ಬಂದ ಕಾರ್ಯಕರ್ತ. ಅವರ ಸಂಘಟನೆ ಹಾಗೂ ಸಿದ್ದರಾಮಯ್ಯ ಅವರ ಆಡಳಿತ ದೇಶಕ್ಕೆ ಮಾದರಿ ಎಂದರು.
ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕೌಶಿಕ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಿರಾ, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್ಕುಮಾರ್, ಮುಖಂಡರಾದ ಬಿಳಾಲುಮನೆ ಉಪೇಂದ್ರ, ದೇವಂತರಾಜ್ ಗೌಡ, ನಂದೀಶ್, ಇಂದಿರಾನಗರ ರಘು ಮತ್ತಿತರರು ಇದ್ದರು. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.