ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ 
ಚಿಕ್ಕಮಗಳೂರು

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಭವನ ಉದ್ಘಾಟನೆ ಜೂ. 11ಕ್ಕೆ

ಪ್ರಮುಖ ಮುಖ್ಯಾಂಶಗಳು

  • ತುಳಸಿ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಒಕ್ಕಲಿಗರ ಮಹಿಳಾ ಭವನ
ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆ ತುಳಸಿ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಒಕ್ಕಲಿಗರ ಮಹಿಳಾ ಭವನದ ಉದ್ಘಾಟನೆ ಜೂ.೧೧ ರಂದು ಬೆಳಗ್ಗೆ ೯.೩೦ಕ್ಕೆ ನೆರವೇರಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ರೀನಾ ಸುಜೇಂದ್ರ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೯೦ ಲಕ್ಷರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಭವನದ ಉದ್ಘಾಟನೆ ಹಾಗೂ ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕರಾದ ಟಿ.ಡಿ.ರಾಜೇಗೌಡ, ಎಚ್. ಡಿ. ತಮ್ಮಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಎಸ್.ಎಲ್ ಭೋಜೇಗೌಡ, ಆರತಿ ಕೃಷ್ಣ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್, ಭದ್ರ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಪ್ರಮುಖರಾದ ಕೆ. ಪೂರ್ಣೇಶ್, ಎಚ್.ಪಿ. ಮಂಜೇಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ಕಟ್ಟಡ ಉದ್ಘಾಟನೆ ನಂತರ ೧೧ಕ್ಕೆ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಗಳನ್ನು ಬೆಳಗ್ಗೆ ೯.೩೦ ಗಂಟೆಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಇದೇ ಸಂದರ್ಭದಲ್ಲಿ ಒಕ್ಕಲಿಗರ ಮಹಿಳಾ ಭವನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಗುವುದು ಎಂದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘವು ೨೦೦೫ ರಿಂದ ಆರಂಭವಾಗಿ ೨೩೫೦ ಸದಸ್ಯರನ್ನು ಹೊಂದಿದೆ. ಮಹಿಳೆಯರಿಗಾಗಿ ಪ್ರತಿ ತಿಂಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳಾ ದಿನಾಚರಣೆ, ವಾರ್ಷಿಕೋತ್ಸವ, ಕ್ರೀಡಾ ದಿನಾಚರಣೆ, ಸರ್ವಸದಸ್ಯರ ಸಭೆ, ಮುಂತಾದ ವಿವಿಧ ಬಗೆಯ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂಘದ ಸದಸ್ಯರಿಗೆ ವಿವಿಧ ಆಟೋಟ ಸ್ಫಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಮಹಿಳಾ ಸಂಘದ ವತಿಯಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ವಿಧವೆಯರಿಗೆ ಸಹಾಯಧನ ನೀಡುತ್ತಿರುವುದರ ಜೊತೆಗೆ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ವಧು - ವರರ ಅನ್ವಾಷಣಾ ಕೇಂದ್ರ ಸ್ಥಾಪಿಸಿ ಪರಸ್ಪರ ಸಹಾಯಕ್ಕಾಗಿ ಸಹಕರಿಸಿದ್ದೇವೆ. ಪ್ರತಿ ಮಂಗಳವಾರ ಭಜನೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಸಹಕಾರ್ಯದರ್ಶಿ ಕೋಮಲ ರವಿ, ಕಾರ್ಯದರ್ಶಿ ಅಮಿತಾ ವಿಜೇಂದ್ರ, ಉಪಾಧ್ಯಕ್ಷೆ ಕಾವ್ಯ ಸುಕುಮಾರ್, ನಿರ್ದೇಶಕರಾದ ಅನುಪಮಾ ರಮೇಶ್, ವೇದಾ ಚಂದ್ರಶೇಖರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಉಪಸ್ಥಿತರಿದ್ದರು.