ಮೂಡಿಗೆರೆಯಲ್ಲಿ ಆಯೋಜಿಸಿದ್ದ ಹಕ್ಕುಪತ್ರ ಹಾಗೂ ಇತರ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು.
ಮೂಡಿಗೆರೆ: ಮಲೆನಾಡು ಭಾಗದಲ್ಲಿ ಕಾಡಾನೆ ಸೇರಿದಂತೆ ಇತರ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನ ರಕ್ಷಣೆಗೆ ಯಾಚಿಸುತ್ತಿದ್ದಾರೆ. ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಜಿಲ್ಲಾಡಳಿತದಿಂದ ಪಟ್ಟಣದ ಅಡ್ಯಂತಾಯ ಮಂದಿರದಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನಗಳ ಹಕ್ಕುಪತ್ರ, ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಇತರ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯ ಸರ್ಕಾರ ವಾರ್ಷಿಕ 2 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಬೆಂಗಳೂರಿನಿಂದ ಬಂದು ಉಸ್ತುವಾರಿ ನೋಡಿಕೊಳ್ಳುವುದಕ್ಕಿಂತ ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಚಿಕ್ಕಮಗಳೂರಿಗೆ ಸಚಿವ ಸ್ಥಾನ ದೊರಕುವ ವಿಶ್ವಾಸವಿದೆ ಎಂದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನಿವೇಶನಕ್ಕಾಗಿ ಫಲಾನುಭವಿಗಳು ಪ್ರತಿ ಗ್ರಾಪಂನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಶಾಸಕರು ಚಂದ್ರಲೋಕದಲ್ಲಿ ನಿವೇಶನ ನೀಡುತ್ತಾರೋ ಎಂದು ಟೀಕೆ ಮಾಡಿದ್ದರು. ಈಗ 8 ಗ್ರಾಪಂ ವ್ಯಾಪ್ತಿಯಲ್ಲಿ 242 ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಕ್ಕುಪತ್ರ ನೀಡಲಾಗುತ್ತಿದೆ. 20 ವರ್ಷದ ಹಿಂದೆ ಮೋಟಮ್ಮ ಅವರು ಶಾಸಕರಾಗಿದ್ದಾಗ ನಿವೇಶನ ನೀಡಲಾಗಿತ್ತು. ನಂತರ ಈವರೆಗೂ ನಿವೇಶನ ನೀಡಿರಲಿಲ್ಲ. ಈಗ ದಾರದಹಳ್ಳಿ, ನಂದಿಪುರ, ತ್ರಿಪುರ, ಹಂತೂರು, ಬಿ.ಹೊಸಳ್ಳಿ, ಬಸ್ಕಲ್ ಸೇರಿದಂತೆ 8 ಗ್ರಾಪಂ ವ್ಯಾಪ್ತಿಯ 18 ಹಳ್ಳಿಯ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿ ಹಕ್ಕುಪತ್ರ ನೀಡಲು ಕಾನೂನು ತೊಡಕು ಎದುರಾಗಿದೆ. ಸದ್ಯದಲ್ಲೇ ಅದನ್ನು ನಿವಾರಿಸಿ ಹಕ್ಕುಪತ್ರ ನೀಡಲಾಗುವುದು. ಉಳಿದ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ನಿವೇಶನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.