ಬೀರೂರಿನ ಕರಗಲ್ ಬೀದಿಯ ಶ್ರೀ ಪಾಂಡುರಂಗ ರುಖುಮಾಯಿಯವರ ದಿಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. 
ಚಿಕ್ಕಮಗಳೂರು

ಬೀರೂರಲ್ಲಿ ವಿಜೃಂಭಣೆಯ ದಿಂಡಿ ಉತ್ಸವ

ಬೀರೂರು: ಬೀರೂರಿನ ಕರಗಲ್ ಬೀರಿಯಲ್ಲಿ ನೆಲೆಸಿರುವ ಶ್ರೀ ಪಾಂಡುರಂಗ ರುಖುಮಾಯಿ ಅವರ ದಿಂಡಿ ಉತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ಧ್ವಜಾರೋಹಣ, ಪಂಚಗವ್ಯ ಪ್ರಾಶನ, ದೇವನಾಂದಿ, ಅಂಕುರಾರ್ಪಣ ನಂತರ ಶ್ರೀವಿಠಲ ರುಖುಮಾಯಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಕೈಂಕರ್ಯಗಳು ನಡೆದವು.
ಪಂಚಾಮೃತ ಅಭಿಷೇಕ, ಬಲಿ ಪ್ರದಾನದ ಬಳಿಕ ಹನುಮಂತರಾವ್ ರಂಗದೋಳ್ ಅವರ ನೇತೃತ್ವದಲ್ಲಿ ಕಲಶಾರೋಹಣ, ಕದಳಿ-ಕೂಷ್ಮಂಡ ಛೇದನ, ಕಲಶಾಭಿಷೇಕ, ಸಾರ್ವತ್ರಿಕ ಅಭಿಷೇಕ, ಸಹಸ್ರ ನಾಮಾರ್ಚನೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗದೊಂದಿಗೆ ದಿಂಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಕಾಕಡಾರತಿ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಬೆಳ್ಳಿ ರಥದಲ್ಲಿ ಶ್ರೀ ವಿಠಲ ರುಖುಮಾಯಿಯವರನ್ನು ಪ್ರತಿಷ್ಠಾಪಿಸಿ ಹಳೇ ಪೇಟೆಯಿಂದ ಅಜ್ಜಂಪುರ ರಸ್ತೆ, ಮಹಾತ್ಮ ಗಾಂಧಿ ವೃತ್ತ ತಲುಪಿ ಬಿ.ಎಚ್.ರಸ್ತೆ ಮಾರ್ಗವಾಗಿ ಹಳೇಪೇಟೆಯ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮುಂಭಗದಿಂದ ಮೂಲಸ್ಥಾನಕ್ಕೆ ಬಂದು ಸೇರಿತು. ಭಜನೆ ಹಾಗೂ ಮಂಗಳವಾದ್ಯಗಳೊಂದಿಗೆ ರಾಜಬೀದಿಗಳಲ್ಲಿ ಉತ್ಸವ ನಡೆಯಿತು.
ಭಾವಸಾರ ಕ್ಷತ್ರಿಯ ಮಂಡಳಿ ಗೌರವಾಧ್ಯಕ್ಷ ಜಿ.ಎಂ.ಪಾಂಡುರಂಗರಾವ್ ಜಿಂಗಾಡೆ, ಅಧ್ಯಕ್ಷ ಬಿ.ವಿ.ವಿನಾಯಕ ಬಾಂಗ್ರೆ, ಉಪಾಧ್ಯಕ್ಷ ಡಿ.ಕುಮಾರ್ ರಾವ್ ಬಾಂಗ್ರೆ, ಪ್ರಧಾನ ಕಾರ್ಯದರ್ಶಿ ಕೆ.ಪುಂಡಲೀಕರಾವ್, ನಿರ್ದೇಶಕರಾದ ಮಂಜುನಾಥ್ ಮಹೇಂದ್ರಕರ್, ಮಾಲತೇಶ್‌ಮೂರ್ತಿ ಬಾಂಗ್ರೆ, ಜಿ.ಎಮ್.ರವಿಕುಮಾರ್ ಜಿಂಗಾಡೆ. ಬಿ.ಎನ್.ಧರಣೇಶ್ ಮಹಳತ್ಕರ್, ಜಿ.ಎಸ್.ಮನೋಹರ್ ಮಹಳತ್ಕರ್. ವಿಜಯ್ ಕುಮಾರ್ ಇದ್ದರು.