ಬೀರೂರಿನ ಕರಗಲ್ ಬೀದಿ ಶ್ರೀ ಪಾಂಡುರಂಗ ರುಖುಮಾಯಿ ದಿಂಡಿ ಉತ್ಸವದಲ್ಲಿ ಕಂಡ ವಿಶೇಷ ಅಲಂಕಾರ.
ಬೀರೂರು: ಬೀರೂರಿನ ಕರಗಲ್ ಬೀದಿ ಶ್ರೀ ಪಾಂಡುರಂಗ ರುಖುಮಾಯಿ ದಿಂಡಿ ಉತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಗುರುವಾರ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ಧ್ವಜಾರೋಹಣ, ಪಂಚಗವ್ಯ ಪ್ರಾಶನ, ದೇವನಾಂದಿ, ಅಂಕುರಾರ್ಪಣೆ ಮಾಡಿ ಶ್ರೀ ವಿಠಲ ರುಖುಮಾಯಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಕೈಂಕರ್ಯ ನೆರವೇರಿಸಲಾಯಿತು.
ಶುಕ್ರವಾರ ವಿಠಲ ರುಖುಮಾಯಿಗೆ ಪಂಚಾಮೃತ ಅಭಿಷೇಕ, ಬಲಿ ಪ್ರದಾನದ ಬಳಿಕ ಹನುಮಂತರಾವ್ ರಂಗದೋಳ್ ನೇತೃತ್ವದಲ್ಲಿ ಕಲಶಾರೋಹಣ, ಕದಳಿ ಛೇದನ, ಕಲಶಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಭಾನುವಾರ ಶ್ರೀ ವಿಠಲನಿಗೆ ಸಾರ್ವತ್ರಿಕ ಅಭಿಷೇಕ, ಸಹಸ್ರ ನಾಮಾರ್ಚನೆ, ಮಹಾಮಂಗಳಾರತಿ ನೆರವೇರಿಸಿ ದಿಂಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸೋಮವಾರ ಬೆಳಗ್ಗೆ ಕಾಕಡಾರತಿ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಬೆಳ್ಳಿ ರಥದಲ್ಲಿ ಶ್ರೀ ವಿಠಲ ರುಖುಮಾಯಿ ಅವರನ್ನು ಪ್ರತಿಷ್ಠಾಪಿಸಿ ಹಳೇಪೇಟೆಯಿಂದ ಹೊರಟು ಅಜ್ಜಂಪುರ ರಸ್ತೆ, ಮಹಾತ್ಮ ಗಾಂಧಿ ವೃತ್ತ ತಲುಪಿ ಬಿ.ಎಚ್.ರಸ್ತೆ ಮಾರ್ಗವಾಗಿ ಹಳೇಪೇಟೆ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮೂಲಸ್ಥಾನಕ್ಕೆ ಬಂದು ಸೇರಿತು. ಮಹಿಳೆಯರು ಮತ್ತು ಪುರುಷರು ಭಜನೆ ಹಾಗೂ ಮಂಗಳವಾದ್ಯಗಳೊಂದಿಗೆ ರಾಜಬೀದಿಗಳಲ್ಲಿ ಉತ್ಸವ ನಡೆಯಿತು.
ಭಾವಸಾರ ಕ್ಷತ್ರಿಯ ಮಂಡಳಿ ಗೌರವಾಧ್ಯಕ್ಷ ಜಿ.ಎಂ.ಪಾಂಡುರಂಗರಾವ್ ಜಿಂಗಾಡೆ, ಅಧ್ಯಕ್ಷ ಬಿ.ವಿ.ವಿನಾಯಕ ಬಾಂಗ್ರೆ, ಉಪಾಧ್ಯಕ್ಷ ಡಿ.ಕುಮಾರ್‌ರಾವ್ ಬಾಂಗ್ರೆ, ಪ್ರಧಾನ ಕಾರ್ಯದರ್ಶಿ ಕೆ.ಪುಂಡಲೀಕರಾವ್, ನಿರ್ದೇಶಕರಾದ ಮಂಜುನಾಥ್ ಮಹೇಂದ್ರಕರ್, ಮಾಲತೇಶ್‌ಮೂರ್ತಿ ಬಾಂಗ್ರೆ, ಜಿ.ಎಂ.ರವಿಕುಮಾರ್ ಜಿಂಗಾಡೆ. ಬಿ.ಎನ್.ಧರಣೇಶ್ ಮಹಳತ್ಕರ್, ಜಿ.ಎಸ್.ಮನೋಹರ್ ಮಹಳತ್ಕರ್, ವಿಜಯ್‌ಕುಮಾರ್ ಇತರರಿದ್ದರು.